ನವದೆಹಲಿ, ಜೂ25(Daijiworld News/SS): ಇತಿಹಾಸದಿಂದ ಪಾಠ ಕಲಿತು ನಾವು ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇಂದು, 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಘೋಷಿಸಿದ್ದ ತುರ್ತು ಪರಿಸ್ಥಿತಿಯ ವಾರ್ಷಿಕೋತ್ಸವ ದಿನವಾಗಿದೆ ಎಂದು ಟ್ವೀಟ್ ಮಾಡಿ ಮಮತಾ ಬ್ಯಾನರ್ಜಿ ಸ್ಮರಿಸಿದ್ದಾರೆ.
ಇದೇ ವೇಳೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಹರಿಹಾಯ್ದಿರುವ ಮಮತಾ ಬ್ಯಾನರ್ಜಿ, ಕಳೆದ 5 ವರ್ಷಗಳಲ್ಲಿ ದೇಶ ದೊಡ್ಡ ತರ್ತು ಪರಿಸ್ಥಿತಿಯನ್ನು ಕಂಡಿತ್ತು. ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಕೂಡ ದೊಡ್ಡ ತುರ್ತುಪರಿಸ್ಥಿತಿಯನ್ನು ನಾವೆಲ್ಲಾ ಎದುರಿಸಿದ್ದೇವೆ. ಇತಿಹಾಸದಿಂದ ಪಾಠ ಕಲಿತು ನಾವು ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾಗಿದೆ ಎಂದು ಹೇಳಿದ್ದಾರೆ.
1975ರ ಜೂನ್ 25ರಂದು ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರು ಘೋಷಿಸಿದ್ದ ತುರ್ತು ಪರಿಸ್ಥಿತಿಗೆ 44ನೇ ವರ್ಷವಾಗಿದೆ. 1975ರಿಂದ 1977ರವರೆಗೆ 19 ತಿಂಗಳು ನಮ್ಮ ದೇಶ ತುರ್ತು ಪರಿಸ್ಥಿತಿ ಎದುರಿಸಿತ್ತು. ನಂತರ 1977ರ ಮಾರ್ಚ್ 21ರಂದು ಹಿಂತೆಗೆದುಕೊಳ್ಳಲಾಯಿತು. ಈ ಸಂದರ್ಭದಲ್ಲಿ ಚುನಾವಣೆಯನ್ನು ರದ್ದುಪಡಿಸಿ ನಾಗರಿಕ ಸ್ವಾತಂತ್ರ್ಯಗಳನ್ನು ಹತ್ತಿಕ್ಕಲಾಗಿತ್ತು. ಸ್ವತಂತ್ರ ಭಾರತದ ಇತಿಹಾಸದಲ್ಲಿ ತುರ್ತು ಪರಿಸ್ಥಿತಿ ವಿವಾದಿತ ಸಮಯವಾಗಿತ್ತು.