ಬೆಂಗಳೂರು, ಜೂ 24 (Daijiworld News/SM): ಜೆಡಿಎಸ್ ಪಕ್ಷಕ್ಕೆ ನೂತನ ರಾಜ್ಯಾಧ್ಯಕ್ಷರನ್ನಾಗಿ ಮಧು ಬಂಗಾರಪ್ಪ ಅವರನ್ನು ನೇಮಕ ಮಾಡಬೇಕೆಂದು ವಿಶ್ವನಾಥ್ ಒತ್ತಾಯಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿಯವರ ಗ್ರಾಮವಾಸ್ತವ್ಯವನ್ನು ಶ್ಲಾಘಿಸಿದರು.
ರಾಜ್ಯದಲ್ಲಿನ ಆಡಳಿತಕ್ಕೆ ಚುರುಕು ಮುಟ್ಟಿಸಿ, ಅಧಿಕಾರಿಗಳನ್ನು ಎಚ್ಚರಿಸಲು ಗ್ರಾಮವಾಸ್ತವ್ಯ ಸಹಕಾರಿಯಾಗಲಿದೆ ಎಂದು ವಿಶ್ವನಾಥ್ ತಿಳಿಸಿದ್ದಾರೆ. ಜನರ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಹೀಗಾಗಿ ಅದರ ಪರಿಹಾರಕ್ಕಾಗಿ ಸಿಎಂ ಮಾತ್ರವಲ್ಲ. ಜಿಲ್ಲಾಧಿಕಾರಿಗಳೂ ಕೂಡ ಗ್ರಾಮವಾಸ್ತವ್ಯ ಮಾಡಬೇಕು ಎಂದು ಸಲಹೆ ನೀಡಿದರು.
ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ನೀಡುವ ಶಿಫಾರಸುಗಳನ್ನು ಶೀಘ್ರ ಅನುಷ್ಟಾನಗೊಳಿಸಬೇಕು. ಇದಕ್ಕೆ ಪ್ರತ್ಯೇಕ ಹಣಕಾಸು ಸಚಿವರ ನೇಮಕವಾಗಬೇಕು. ಇತ್ತೀಚಿನ ವರ್ಷಗಳಲ್ಲಿ ಮುಖ್ಯಮಂತ್ರಿಗಳೇ ಹಣಕಾಸು ಖಾತೆ ಹೊಂದಿರುವುದರಿಂದ ಈ ಕೆಲಸ ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.