ಬೆಂಗಳೂರು,ಜು. 31 (DaijiworldNews/AK): ಮೈಸೂರು ಮುಡಾದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆ ವಿಚಾರವಾಗಿ ನಿವೃತ್ತ ನ್ಯಾಯಾಧೀಶರಾದ ಪಿ.ಎನ್.ದೇಸಾಯಿ ಆಯೋಗದಿಂದ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ವಿಧಾನಸೌಧದ ಮುಖ್ಯಕಾರ್ಯದರ್ಶಿಗಳ ಕೊಠಡಿಯಲ್ಲಿ ಸರ್ಕಾರದ ಪರವಾಗಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವರದಿ ಸ್ವೀಕರಿಸಿದರು. ನ್ಯಾ.ಪಿ.ಎನ್.ದೇಸಾಯಿ ಏಕಸದಸ್ಯ ಆಯೋಗ ಸರ್ಕಾರಕ್ಕೆ ಆರು ಸಂಪುಟಗಳ ವರದಿ ಸಲ್ಲಿಸಿದೆ. ಮುಂದಿನ ಕ್ಯಾಬಿನೆಟ್ ನಲ್ಲಿ ವರದಿ ಮಂಡಿಸುವ ಸಾಧ್ಯತೆಯಿದ್ದು, ವರದಿ ಆಧರಿಸಿ ಕ್ರಮಕ್ಕೆ ಮುಂದಾಗುತ್ತಾ ಸರ್ಕಾರ ಕಾದುನೋಡಬೇಕಿದೆ.
ಕೆಲ ರಾಜಕಾರಣಿಗಳು, ಅಧಿಕಾರಿಗಳು, ಬಿಲ್ಡರ್ ಗಳಿಗೆ ಸಂಕಷ್ಟವೋ? ರಿಲೀಫ್ ಸಿಗುತ್ತೋ ಎಂಬ ಕುತೂಹಲವಿದೆ. ಅಂದಹಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯಅವರ ಪತ್ನಿ ಪಾರ್ವತಿ ಅವರಿಗೆ ಮುಡಾದಿಂದ ಬದಲಿ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಬಂದ ಕಾರಣದಿಂದ ವಿಚಾರಣಾ ಆಯೋಗ ರಚಿಸಲಾಗಿತ್ತು.
2024 ಜುಲೈನಲ್ಲಿ ನ್ಯಾ.ಪಿ.ಎನ್.ದೇಸಾಯಿ ಏಕಸದಸ್ಯ ಆಯೋಗ ರಚಿಸಿದ್ದ ಸರ್ಕಾರ, 2006ರಿಂದ 2024ರ ಜುಲೈ 15ರವರೆಗೂ ನಡೆದಿರುವ ಭೂಸ್ವಾಧೀನ, ಬಡಾವಣೆಗಳ ನಿರ್ಮಾಣ, ನಿವೇಶನ ಹಂಚಿಕೆ, ಪರಿಹಾರ ವಿತರಣೆ ಮತ್ತು ಬದಲಿ ನಿವೇಶನಗಳ ಹಂಚಿಕೆ ಕುರಿತ ಆರೋಪಗಳ ಕುರಿತು ವಿಚಾರಣೆಗೆ ಸೂಚಿಸಿತ್ತು.ವರ್ಷದ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಿರುವ ನ್ಯಾ.ದೇಸಾಯಿ ನೇತೃತ್ವದ ಆಯೋಗ ಹಲವು ಶಿಫಾರಸ್ಸುಗಳ ಮಾಡಿದೆ ಎನ್ನಲಾಗಿದೆ.