ಬೆಂಗಳೂರು, ಆ. 04 (DaijiworldNews/AK): ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಸಾಧ್ಯ; ಎನ್ಡಿಎ ಅಲ್ಲಿ ಅಧಿಕಾರಕ್ಕೆ ಬರಲಿದೆ ಎಂಬುದು ಖಾತರಿ ಆದ ಬಳಿಕ ದೇಶದಲ್ಲಿ ಗೊಂದಲ ಸೃಷ್ಟಿಸುವ ಕೆಲಸವನ್ನು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.

“ಹರ್ ಘರ್ ತಿರಂಗ” (ಮನೆ ಮನೆಗೆ ತ್ರಿವರ್ಣ) ಅಭಿಯಾನದ ಸಂಬಂಧ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯ ಮಟ್ಟದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಾರಾಷ್ಟ್ರ ಮತ್ತಿತರ ರಾಜ್ಯಗಳಲ್ಲಿ ಚುನಾವಣಾ ಆಯೋಗದ ದುರ್ಬಳಕೆ ಆಗಿದೆ ಎಂದಿದ್ದಾರೆ. ಕರ್ನಾಟಕದಲ್ಲೂ ಮತ ಅಕ್ರಮ ಆಗಿದೆ ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಹೇಳುತ್ತಿದ್ದಾರೆ ಎಂದು ಟೀಕಿಸಿದರು. ಬೆಂಗಳೂರು ಕೇಂದ್ರ, ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಚುನಾವಣಾ ಆಯೋಗದ ದುರುಪಯೋಗ ಮಾಡಿಕೊಂಡಿದೆ ಎಂದು ಆರೋಪಿಸಿ, ಅಪಪ್ರಚಾರ ಮಾಡುತ್ತಿದ್ದಾರೆ. ಈ ಮೂಲಕ ದೇಶದಲ್ಲಿ ಗೊಂದಲ ಸೃಷ್ಟಿಸಲು ಕಾಂಗ್ರೆಸ್ ಹೊರಟಿದೆ ಎಂದು ದೂರಿದರು.
ಮಹಾರಾಷ್ಟ್ರ ಮತ್ತಿತರ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಪರಾಭವಗೊಂಡಿತ್ತು. ಬಳಿಕ ಕೇಂದ್ರದಲ್ಲಿ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕೆಂಬ ಹಪಾಹಪಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಇತ್ತು. ಅದರಲ್ಲೂ ಅವರು ಯಶಸ್ಸು ಕಾಣಲು ಸಾಧ್ಯವಾಗಿಲ್ಲ ಎಂದು ವಿಶ್ಲೇಷಿಸಿದರು.
ರಾಹುಲ್ ಅಪಪ್ರಚಾರಕ್ಕೆ ಪ್ರತ್ಯುತ್ತರ: ಬಿಜೆಪಿ ಸಿದ್ಧ..
ಕರ್ನಾಟಕ ಎಂದರೆ ರಾಹುಲ್ ಅವರಿಗೆ ವಿಶೇಷ ಪ್ರೀತಿ. ರಾಜ್ಯವನ್ನು ಕಾಂಗ್ರೆಸ್ ಪಕ್ಷದ ಎಟಿಎಂ ಆಗಿ ಪರಿವರ್ತಿಸಲಿದ್ದಾರೆ ಎಂದು ನಾವು ಚುನಾವಣೆ ವೇಳೆ ಹೇಳಿದ್ದೆವು. ಕಪ್ಪ ಕಾಣಿಕೆಗೆ ಕರ್ನಾಟಕವನ್ನು ದುರ್ಬಳಕೆ ಮಾಡಲಿದ್ದಾರೆ ಎಂದು ಹೇಳುತ್ತಿದ್ದೆವು. ಬೆಲೆ ಏರಿಕೆ ಮೂಲಕ ರಾಜ್ಯದ ಜನರ ಮೇಲೆ ಬರೆ ಎಳೆಯುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ವಿಜಯೇಂದ್ರ ಅವರು ಆರೋಪಿಸಿದರು.
ದೇಶದ್ರೋಹಿಗಳಿಗೆ ಕರ್ನಾಟಕ ಸ್ವರ್ಗವಾದರೆ, ರಾಹುಲ್ ಅವರಿಗೆ ಕರ್ನಾಟಕ ಎಂದರೆ ಬಹಳ ಪ್ರೀತಿ. ಇದು ಇಲ್ಲಿನ ಜನತೆಯ ಮೇಲಲ್ಲ; ದೆಹಲಿಗೆ ಎಲ್ಲ ರೀತಿ ವ್ಯವಸ್ಥೆ ತಲುಪುತ್ತಿದೆ ಎಂಬುದೇ ಇದಕ್ಕೆ ಕಾರಣ ಎಂದು ವಿವರಿಸಿದರು. ಅಪಪ್ರಚಾರಕ್ಕಾಗಿ ನಾಳೆ ಮತ್ತೆ ಬರುತ್ತಾರೆ. ಬಿಜೆಪಿ ಕೂಡ ಇದಕ್ಕೆ ಪ್ರತ್ಯುತ್ತರ ಕೊಡಲು ಸಜ್ಜಾಗಿದೆ ಎಂದರು.