ದೊಡ್ಡಬಳ್ಳಾಪುರ, ಜೂ 25 (Daijiworld News/SM): ನಗರದ ಚಿಕ್ಕಪೇಟೆಯಲ್ಲಿನ ಮಸೀದಿಯಲ್ಲಿ ಆಶ್ರಯ ಪಡೆದಿದ್ದ ಬಾಂಗ್ಲಾದೇಶ ಮೂಲದ ಜಮಾತ್ ಉಲ್ ಮುಜಹಿದ್ದೀನ್ ಬಾಂಗ್ಲದೇಶ್ ಸಂಘಟನೆಗೆ ಸೇರಿದ ಉಗ್ರಗಾಮಿ ಸದಸ್ಯನನ್ನು ಮಂಗಳವಾರ ಬೆಳಿಗ್ಗೆ ರಾಷ್ಟ್ರೀಯ ತನಿಖಾ ತಂಡ ಬಂಧಿಸಿದೆ. ಬಂಧಿತನನ್ನು ಅಬಿಬುಲ್ಲಾ ರೆಹಮಾನ್(30) ಎಂದು ಗುರುತಿಸಲಾಗಿದೆ.
2014ರಲ್ಲಿ ಬಿಹಾರದ ಬುದ್ದಗಯಾ ಸಮೀದ ನಗರದಲ್ಲಿ ಬಾಂಬ್ ತಯಾರಿಕೆ ಸಂದರ್ಭದಲ್ಲಿ ಬಾಂಬ್ ಸ್ಪೋಟಗೊಂಡು ಇಬ್ಬರು ಮೃತಪಟ್ಟಿದ್ದರು. ಹಾಗೂ ಸುಮಾರು 40 ಜನ ಗಾಯಗೊಂಡಿದ್ದರು. ಬಾಂಬ್ ತಯಾರಿಕೆಯಲ್ಲಿ ಭಾಗಿಯಾಗಿದ್ದ ಬಾಂಗ್ಲದೇಶದ ಅಬಿಬುಲ್ಲಾ ರೆಮಹಾನ್ ಅಂದಿನಿಂದಲು ತಲೆಮರೆಸಿಕೊಂಡಿದ್ದ.
ಈತನ ಬಂಧನಕ್ಕಾಗಿ ಎನ್ಐಎ ತಂಡ ಸತತ ಐದು ವರ್ಷಗಳಿಂದಲು ಶೋಧನೆಯಲ್ಲಿ ತೊಡಗಿತ್ತು ಎಂದು ಪೊಲೀಸ್ ಮೂಲಗಳು ತಿಳಿವೆ. ನಗರದಲ್ಲಿ ಉಗ್ರನಿಗೆ ಆಶ್ರಯ ನೀಡಿದ್ದ ಮೌಲ್ವಿ ಅನ್ವರ್ಹುಸೇನ್ ಎಂಬಾತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಬಂಧಿತ ಉಗ್ರ ಅಬಿಬುಲ್ಲಾ ರೆಹಮಾನ್ ನನ್ನು ಬೆಂಗಳೂರಿನ ವಿಶೇಷ ಎನ್ಐಎ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆಯಲು ಅಸ್ಸಾಂ ಹಾಗೂ ಬೆಂಗಳೂರು ಎನ್ಐಎ ತಂಡದ ಅಧಿಕಾರಿಗಳು ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.