ರಾಯಚೂರು, ಜೂ26(Daijiworld News/SS): ರಾಯಚೂರಿನ ಮಾನ್ವಿಯ ಕರೆಗುಡ್ಡ ಊರಿನಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಸಕಲ ತಯಾರಿಗಳನ್ನು ನಡೆಸಲಾಗಿದೆ.
ಮಾನ್ವಿ ತಾಲೂಕಿನ ಕರೇಗುಡ್ಡದಲ್ಲಿ ಗ್ರಾಮ ವಾಸ್ತವ್ಯ ಮಾಡುವುದಕ್ಕಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬುಧವಾರ ಬೆಳಿಗ್ಗೆ 6 ಗಂಟೆಗೆ ಉದ್ಯಾನ್ ಎಕ್ಸ್ಪ್ರೆಸ್ ರೈಲಿನ ಮೂಲಕ ಮೂಲಕ ರಾಯಚೂರು ನಗರಕ್ಕೆ ಬಂದಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ, ಜಿಲ್ಲಾಧಿಕಾರಿ ಶರತ್ ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ಅವರು ಪುಷ್ಪಗುಚ್ಚ ನೀಡಿ ಸಿಎಂ ಅವರನ್ನು ಸ್ವಾಗತಿಸಿದ್ದಾರೆ.
ತುಂಗಭದ್ರಾ ಎಡದಂಡೆ ಕಾಲುವೆ ಹಂಗಾಮಿ ಕಾರ್ಮಿಕರು, ಯರಮರಸ್ ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಹಂಗಾಮಿ ಕಾರ್ಮಿಕರು ಹಾಗೂ ರಾಯಚೂರು ವಿಶ್ವವಿದ್ಯಾಲಯ ಹೋರಾಟ ಸಮಿತಿ ಮುಖಂಡರೊಂದಿಗೆ ಚರ್ಚಿಸಲಿದ್ದಾರೆ. 10 ಗಂಟೆ ಸುಮಾರಿಗೆ ಕರೆಗುಡ್ಡ ಸರ್ಕಾರಿ ಶಾಲೆಯ ಆವರಣದಲ್ಲಿ ಸಾರ್ವಜನಿಕ ಸಭೆ ಪ್ರಾರಂಭವಾಗಲಿದ್ದು, ಉದ್ಘಾಟನೆ ನಂತರ ಅವಹಾಲು ಸ್ವೀಕಾರ ಆರಂಭವಾಗಲಿದೆ. ಸಂಜೆ 6 ಗಂಟೆ ವರೆಗೆ ಅವಹಾಲು ಸ್ವೀಕಾರ ನಡೆಯಲಿದೆ.
ಜೂನ್ 21 ರಂದು ಯಾದಗಿರಿ ಜಿಲ್ಲೆಯ ಚಂಡರಕಿ ಗ್ರಾಮದಲ್ಲಿ ಮೊದಲ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆದಿತ್ತು, ಆ ಕಾರ್ಯಕ್ರಮಕ್ಕೆ ಸಹ ಕುಮಾರಸ್ವಾಮಿ ಅವರು ರೈಲಿನಲ್ಲಿಯೇ ಪ್ರಯಾಣ ಬೆಳೆಸಿದ್ದರು.