ನವದೆಹಲಿ, ಜೂ26(Daijiworld News/SS): ಪ್ರಸಕ್ತ ವರ್ಷದ ಜನವರಿಯಿಂದ ಜೂನ್ವರೆಗಿನ ಅವಧಿಯಲ್ಲಿ ಒಟ್ಟು 113 ಉಗ್ರರನ್ನು ಮಟ್ಟಹಾಕಲಾಗಿದೆ ಎಂದು ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಜಿ. ಕಿಶನ್ ರೆಡ್ಡಿ ಹೇಳಿದ್ದಾರೆ.
ಭಯೋತ್ಪಾದಕರನ್ನು ಮಟ್ಟ ಹಾಕಲು ಪಣ ತೊಟ್ಟಿರುವ ಕೇಂದ್ರ ಸರ್ಕಾರವು ಕಳೆದ 3 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 700ಕ್ಕೂ ಅಧಿಕ ಭಯೋತ್ಪಾದಕರನ್ನು ಹೊಡೆದುರುಳಿಸಿದೆ. ಪ್ರಸಕ್ತ ವರ್ಷದ ಜನವರಿಯಿಂದ ಜೂನ್ವರೆಗಿನ ಅವಧಿಯಲ್ಲಿ ಒಟ್ಟು 113 ಉಗ್ರರನ್ನು ಮಟ್ಟಹಾಕಲಾಗಿದೆ. 2018ರಲ್ಲಿ 257 ಉಗ್ರರು, 2017ರಲ್ಲಿ 213 ಮತ್ತು 2016ರಲ್ಲಿ 150 ಭಯೋತ್ಪಾದಕರನ್ನು ಹತ್ಯೆಗೈಯ್ಯಲಾಗಿದೆ ಎಂದು ತಿಳಿಸಿದ್ದಾರೆ.
ಒಟ್ಟು 3 ವರ್ಷಗಳಲ್ಲಿ ಒಟ್ಟು 733 ಉಗ್ರರನ್ನು ಸದೆಬಡಿದಂತಾಗಿದೆ. ಮಾತ್ರವಲ್ಲ, ಈ ಅವಧಿಯಲ್ಲಿ ಒಟ್ಟು 112 ನಾಗರಿಕರು ಕೂಡ ಅಸುನೀಗಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯವು ಲೋಕಸಭೆಗೆ ಮಾಹಿತಿ ನೀಡಿದೆ.
ಐಸಿಸ್ ಉಗ್ರ ಸಂಘಟನೆಯು ತನ್ನ ಸಿದ್ಧಾಂತವನ್ನು ಪ್ರಚುರಪಡಿಸಲು ವಿವಿಧ ಇಂಟರ್ನೆಟ್-ಆಧರಿತ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿದೆ. ಇದರ ಬಗ್ಗೆ ಭದ್ರತಾ ಸಂಸ್ಥೆಗಳು ನಿಗಾ ಇಟ್ಟಿವೆ. ನಿಷೇಧಿತ ಇಸ್ಲಾಮಿಕ್ ಸ್ಟೇಟ್(ಐಸಿಸ್) ಉಗ್ರ ಸಂಘಟನೆಯ ಸದಸ್ಯರು ಹಾಗೂ ಆ ಸಂಘಟನೆ ಬಗ್ಗೆ ಮೃದು ಧೋರಣೆ ಹೊಂದಿರುವ ಒಟ್ಟು 155 ಮಂದಿಯನ್ನು ಈವರೆಗೆ ಬಂಧಿಸಲಾಗಿದೆ ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ.