ಹೊಸದಿಲ್ಲಿ, ಜೂ26(Daijiworld News/SS): 23 ಮಾನದಂಡಗಳನ್ನು ಗಣನೆಗೆ ತೆಗೆದುಕೊಂಡು ಸಿದ್ಧಪಡಿಸಿದ 'ಹೆಲ್ತಿ ಸ್ಟೇಟ್ಸ್, ಪ್ರೊಗ್ರೆಸಿವ್ ಇಂಡಿಯಾ' ವರದಿಯನ್ನು ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್ ಬಿಡುಗಡೆ ಮಾಡಿದ್ದು, ಕರ್ನಾಟಕ 8ನೇ ಸ್ಥಾನದಲ್ಲಿದೆ.
'ಹೆಲ್ತಿ ಸ್ಟೇಟ್ಸ್, ಪ್ರೊಗ್ರೆಸಿವ್ ಇಂಡಿಯಾ' ವರದಿಯಲ್ಲಿ ಕೇರಳ ಟಾಪರ್ ಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶಕ್ಕೆ ಕೊನೆಯ ಸ್ಥಾನ ಸಿಕ್ಕಿದೆ. ಆರೋಗ್ಯ ಸೂಚ್ಯಂಕದಲ್ಲಿ ಬಿಹಾರ ಹಾಗೂ ಉತ್ತರ ಪ್ರದೇಶ ತೀರಾ ಹಿಂದುಳಿದಿರುವುದನ್ನು ವರದಿ ತಿಳಿಸಿದೆ.
ಆರೋಗ್ಯ ಸ್ಥಿತಿಗತಿ ವಿಚಾರದಲ್ಲಿ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದು, ಉತ್ತಮ ಮಟ್ಟ ಕಾಪಾಡಿಕೊಂಡು ಬಂದಿವೆ. ಹರಿಯಾಣ, ರಾಜಸ್ಥಾನ ಮತ್ತು ಜಾರ್ಖಂಡ್ ಆರೋಗ್ಯ ಗುಣಮಟ್ಟದಲ್ಲಿ ಸುಧಾರಣೆ ಕಂಡಿವೆ. ಆದರೆ ಛತ್ತೀಸ್ಗಢ ಅತಿ ಕಡಿಮೆ ಗುಣಮಟ್ಟ ಸಾಧಿಸಿರುವ ರಾಜ್ಯವಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ.
2018ರ ಫೆಬ್ರವರಿಯಲ್ಲಿ ಬಿಡುಗಡೆಯಾಗಿದ್ದ ಮೊದಲ ಹಂತದ ಆರೋಗ್ಯ ಸೂಚ್ಯಂಕಕ್ಕಾಗಿ 2014-15 ರಿಂದ 2015-16ರ ಅವಧಿಯ ನಿರ್ವಹಣೆಯನ್ನು ಪರಿಗಣಿಸಲಾಗಿತ್ತು. ಎರಡನೇ ಹಂತದ ಆರೋಗ್ಯ ಸೂಚ್ಯಂಕಕ್ಕಾಗಿ 2015-16 ರಿಂದ 2017-18ರ ಅವಧಿಯ ನಿರ್ವಹಣೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.
ಆರೋಗ್ಯಕರ ರಾಜ್ಯಗಳ ಪಟ್ಟಿಯಲ್ಲಿ ಕೇರಳ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಗುಜರಾತ್, ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು -ಕಾಶ್ಮೀರ, ಕರ್ನಾಟಕ, ತಮಿಳುನಾಡು, ತೆಲಂಗಾಣ ರಾಜ್ಯಗಳ ಹೆಸರು ಸೇರಿಕೊಂಡಿದೆ.