ರಾಯಚೂರು,ಜೂ 26 (Daijiworld News/MSP): ರಾಯಚೂರು ಜಿಲ್ಲೆಯ ಕರೇಗುಡ್ಡದಲ್ಲಿ ಗ್ರಾಮವಾಸ್ತವ್ಯ ನಡೆಸಲಿರುವ ಸಿಎಂ ಕುಮಾರಸ್ವಾಮಿ ರಾಜಧಾನಿಯಿಂದ ರಾಯಚೂರಿಗೆ ರೈಲು ಮೂಲಕ ಪ್ರಯಾಣಿಸಿದ ಬಳಿಕ ಯರಮರಸ್ ಸರ್ಕಿಟ್ ಹೌಸ್ನಲ್ಲಿ ಉಳಿದುಕೊಂಡಿದ್ದಾರೆ. ಅತ್ತ ಕಡೆ ನಾಡದೊರೆಯ ಸ್ವಾಗತಕ್ಕಾಗಿ ಬಿಸಿಲ ನಾಡು ರಾಯಚೂರು ಸಿದ್ದವಾಗಿದ್ದು, ಜನರಲ್ಲಿ ಸಡಗರ, ಸಂಭ್ರಮ ಮನೆ ಮಾಡಿದೆ.
ಇನ್ನು ಸರ್ಕಿಟ್ ಹೌಸ್ನಲ್ಲಿ ಉಳಿದುಕೊಂಡಿದ್ದ ಮುಖ್ಯಮಂತ್ರಿಗಳನ್ನು ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್, ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಸೇರಿದಂತೆ ಹಲವರು ಪಕ್ಷದ ನಾಯಕರು ಭೇಟಿಯಾಗಿ ಮಾತುಕತೆ ನಡೆಸಿದರು. ಆ ಬಳಿಕ ರಸ್ತೆ ಮಾರ್ಗವಾಗಿ ಸಿಎಂ ಕರೆಗುಡ್ಡಕ್ಕೆ ಪ್ರಯಾಣ ಬೆಳೆಸಿದರು. KA-36, F-1614 ನಂಬರಿನ ಬಸ್ ಮೂಲಕ ಕರೇಗುಡ್ಡ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಸಿಎಂ ಪ್ರತಿಭಟನಾಕಾರ ಬಿಸಿ ತಟ್ಟಿದೆ.
ಅವರು ತೆರಳುವ ರಸ್ತೆಗೆ ಅಡ್ಡಲಾಗಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಕಾರರೊಂದಿಗೆ ಬಸ್ಸಿನಲ್ಲಿಯೇ ಕುಳಿತು ಮುಖ್ಯಮಂತ್ರಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರೊಂದಿಗೆ ರಸ್ತೆ ತಡೆದು ಯಾಕೆ ಪ್ರತಿಭಟನೆ ನಡೆಸುತ್ತೀರಿ, ನೀವೆಲ್ಲಾ ನೇರವಾಗಿ ನನ್ನ ಬಳಿ ಯಾಕೆ ಬಂದಿಲ್ಲ ಎಂದು ಪ್ರಶ್ನಿಸಿದ್ದು ಮಾತ್ರವಲ್ಲದೆ ನೀವು ನರೇಂದ್ರ ಮೋದಿಗೆ ವೋಟು ಹಾಕಿದ್ದೀರಿ. ಈಗ ನನ್ನ ಯಾಕೆ ಕೇಳುತ್ತೀರಿ ಎಂದು ಸಿಎಂ ಗರಂ ಆಗಿದ್ದಾರೆ. ಆ ಬಳಿಕ ಬೇಡಿಕೆ ಈಡೇರಿಸುವ ಭರವಸೆ ನೀಡಿ ಮುಂದೆ ಪ್ರಯಾಣಿಸಿದರು.