ಬೆಂಗಳೂರು, ಜೂ26(Daijiworld News/SS): ಸಿಬಿಎಸ್ಇ ಮತ್ತು ಐಸಿಎಸ್ಇ ಶಾಲೆಗಳಲ್ಲಿ ಒಂದು ಭಾಷೆಯಾಗಿ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕು. ಇದರಲ್ಲಿ ಲೋಪವೇನಾದರೂ ಕಂಡುಬಂದರೆ ಬಿಇಒ ಮತ್ತು ಡಿಡಿಪಿಐಗಳನ್ನೇ ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಆರ್.ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಪಠ್ಯಕ್ರಮದಲ್ಲಿ ಬೋಧನೆ ಮಾಡುವ ಅನುಮತಿ ಪಡೆದು ಕೇಂದ್ರೀಯ ಪಠ್ಯಕ್ರಮದಲ್ಲಿ ಪಾಠ ಮಾಡುವ ಶಾಲೆಗಳ ಬಗ್ಗೆಯೂ ಮಾಹಿತಿ ಇದೆ. ಪ್ರತಿ ಜಿಲ್ಲೆಗೆ ಭೇಟಿ ನೀಡಿ ಸಭೆ ನಡೆಸಲಿದ್ದೇನೆ. ಕೆಲವು ಶಾಲೆಗಳಿಗೆ ಭೇಟಿ ನೀಡಲಿದ್ದೇನೆ. ಆಗ ಇಂತಹ ಅಕ್ರಮ ನಡೆಯುತ್ತಿರುವುದು ಸಾಬೀತಾದರೆ ಕ್ರಮ ನಿಶ್ಚಿತ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಅವರು ಈಗಾಗಲೇ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸಿದ್ದಾರೆ. ಪ್ರಾಯೋಗಿಕವಾಗಿ ಇಂದು ತಾಲ್ಲೂಕಿನಲ್ಲಿ 4ರಿಂದ 5 ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಕಲಿಕೆ ಆರಂಭವಾಗಿದೆ. ಇದನ್ನು ಹೆಚ್ಚಿಸಬೇಕೆಂಬ ಬೇಡಿಕೆ ಇದೆ. ಇದರ ಬಗ್ಗೆ ಚರ್ಚಿಸಿ ಮುಂದಿನ ವರ್ಷದಿಂದ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಜತೆಗೆ ಕನ್ನಡ ಶಾಲೆಗಳು ಮುಚ್ಚುವ ಪ್ರಮಾಣ ಹೆಚ್ಚುತ್ತಿದ್ದು, ಅದನ್ನು ತಡೆಗಟ್ಟಲು ಸಹ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಆಡಳಿತ ಮಂಡಳಿಗಳ ಸಂಘದ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್, ಸಿಬಿಎಸ್ಇ, ಐಸಿಎಸ್ಇ ಶಾಲೆಗಳಲ್ಲಿ ಕನ್ನಡ ಕಲಿಕೆ ಕಡ್ಡಾಯಗೊಳಿಸಿದ ನೂತನ ಶಿಕ್ಷಣ ಸಚಿವರ ಆಶಯ ಒಳ್ಳೆಯದೇ. ಆದರೆ ಅಧಿಕಾರಿಗಳು ಅವರಿಗೆ ಈ ವಿಷಯದಲ್ಲಿ ಅರ್ಧ ಸತ್ಯವನ್ನಷ್ಟೇ ಹೇಳಿ ದಾರಿ ತಪ್ಪಿಸಿದಂತೆ ಕಾಣುತ್ತದೆ. ವಿಷಯವನ್ನು ಸರಿಯಾಗಿ ತಿಳಿದುಕೊಂಡರೆ ಎಲ್ಲರಿಗೂ ಅನುಕೂಲ ಎಂದು ಹೇಳಿದ್ದಾರೆ.
ಐಸಿಎಸ್ಇಯಲ್ಲಿ ಎರಡು ಭಾಷೆ ಕಲಿಕೆಗೆ ಮಾತ್ರ ಅವಕಾಶ ಇದೆ. ಕನ್ನಡ ಕಲಿಕೆಯನ್ನು ಕಡ್ಡಾಯ ಮಾಡಿದರೆ ಕನ್ನಡ ಗೊತ್ತಿಲ್ಲದ ರಾಜ್ಯದ ಹೊರಭಾಗದವರು ನ್ಯಾಯಾಲಯದಲ್ಲಿ ದಾವೆ ಹೂಡಿದರೆ ಉದ್ದೇಶ ಬುಡಮೇಲಾಗಿ ಬಿಡುತ್ತದೆ. ಹೀಗಾಗಿ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ವತಿಯಿಂದ ಕನ್ನಡ ಭಾಷೆ ಕಲಿಕೆಗೆ ಹಾಗೂ ಕನ್ನಡ ಪರೀಕ್ಷೆ ನಡೆಸುವ ಸಂಬಂಧ ಸೂಕ್ತ ಆದೇಶ ಹೊರಡಿಸಬೇಕು ಎಂದು ಹೇಳಿದ ಅವರು, ಕನ್ನಡ ಕಲಿಸುವುದಕ್ಕೆ ಅಧಿಕೃತ ಮಾನದಂಡವನ್ನು ನಿಗದಿಪಡಿಸಿದರೆ ಯಾವುದೇ ತೊಂದರೆ ಇಲ್ಲದೆ ಶಾಲೆಗಳು ಕನ್ನಡ ಕಲಿಸಬಹುದು’ ಎಂದು ಹೇಳಿದ್ದಾರೆ.