ಬೆಂಗಳೂರು, ಜೂ 26 (Daijiworld News/MSP): ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಸೋತಿರುವ ವೀರಪ್ಪ ಮೊಯ್ಲಿ ತಮ್ಮ ನೆಚ್ಚಿಗೆ ವೃತ್ತಿಗೆ ವಾಪಾಸಾಗಿದ್ದಾರೆ. ಹೌದು ಖಾದಿ ತೊಟ್ಟು ರಾಜಕಾರಣಿಯಾಗಿದ್ದ ಮೊಯ್ಲಿ ಕರಿಕೋಟು ಧರಿಸಿ ತಮ್ಮ ಹಳೇ ವೃತ್ತಿಗೆ ಹಿಂತಿರುಗಿದ್ದಾರೆ.
ಈ ನಡುವೆ ತಮ್ಮ ಮನೆಯ ಮುಂದಿದ್ದ ನಾಮಫಲಕವನ್ನು ಬದಲಾಯಿಸಿ, ಮಾಜಿ ಸಿಎಂ ಅಥವಾ ಮಾಜಿ ಕೇಂದ್ರ ಸಚಿವ ಎಂದು ಹಾಕಿಕೊಳ್ಳದೆ ವಕೀಲರು ಎಂಬ ನಾಮಫಲಕ ಹಾಕಿಕೊಂಡಿದ್ದಾರೆ.
79 ವರ್ಷದ ಮೊಯ್ಲಿ, ವಕೀಲರಾಗಿ, ಶಾಸಕರಾಗಿ, ಸಿಎಂ ಆಗಿ ಸಂಸದ ಮತ್ತು ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ ಅನುಭವ ಅವರಿಗಿದೆ. ಇಲ್ಲಿ ತನಕ ರಾಜಕಾರಣಿಯಾಗಿ ಸಭೆ ಸಮಾರಂಭದಲ್ಲಿ ಭಾಗವಹಿಸಿ ಭಾಷಣ ಮಾಡುತ್ತಿದ್ದ ಮೊಯ್ಲಿ ಇನ್ನು ಮುಂದೆ ನ್ಯಾಯಾಲಯದ ಮುಂದೆ ತಮ್ಮ ಕಕ್ಷಿದಾರರ ಪರವಾಗಿ ವಾದ ಮಂಡಿಸಲಿದ್ದಾರೆ. 14 ವರ್ಷದ ಬಳಿಕ ಸೋಮವಾರದಂದು ಹೈಕೋರ್ಟ್ ನಲ್ಲಿ ಪ್ರತ್ಯಕ್ಷರಾಗಿದ್ದ ವೀರಪ್ಪ ಮೊಯ್ಲಿ 2004 ರ ತಮ್ಮದೇ ಪ್ರಕರಣವೊಂದರ, ವಾದ ಮಂಡಿಸಿದ್ದಾರೆ.
ಕರಾವಳಿಯವರಾದ ಮೊಯ್ಲಿಯವರು ತಮ್ಮ ಪ್ರಾಥಮಿಕ ಹಾಗು ಮಾಧ್ಯಮಿಕ ಶಿಕ್ಷಣಗಳನ್ನು ಮೂಡಬಿದಿರಿಯಲ್ಲಿ ಪೂರೈಸಿ, ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಅಧ್ಯಯನ ಪೂರೈಸಿ, ಪದವಿ ಪಡೆದಿದ್ದರು. ಆ ಬಳಿಕ ಕರ್ನಾಟಕ ಸರಕಾರದ ಮೀನುಗಾರಿಕೆ ಇಲಾಖೆಯಲ್ಲಿ, ತದ ನಂತರ ಭಾರತೀಯ ಜೀವವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿದ್ದಂತೆಯೆ , ಬೆಂಗಳೂರಿನ ಸರಕಾರಿ ಕಾನೂನು ಕಾಲೇಜಿನಿಂದ ಬಿ.ಎಲ್.ಪದವಿ ಪಡೆದರು.
ಬಿಎ ಎಲ್ ಎಲ್ ಬಿ ಪದವಿ ಪಡೆದಿರುವ ಮೊಯ್ಲಿ ಸಂಸದರಾಗಿ ಹಾಗೂ ಕೇಂದ್ರ ಸಚಿವರಾಗಿದ್ದ ಕಾರಣದಿಂದಾಗಿ ಲಾಯರ್ ವೃತಿಯಿಂದ ದೂರ ಉಳಿದಿದ್ದರು.