ಹೊಸದಿಲ್ಲಿ, ಜೂ26(Daijiworld News/SS): ಯುದ್ಧಭೂಮಿಯಲ್ಲಿ ಸಿಟ್ಟು ತೋರಿಸಲು ಆಗದವರು ಸದನದಲ್ಲಿ ಸಿಟ್ಟು ತೋರಿಸಲು ಮುಂದಾಗುತ್ತಿದ್ದಾರೆ. ದೇಶವು ನಮಗೆ ಸೇವೆ ಮಾಡಲು ಅವಕಾಶ ಕೊಟ್ಟಿದೆ. ನಾನಂತೂ ದೇಶದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಬುಧವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಸರ್ದಾರ್ ಪಟೇಲರು ಕಾಂಗ್ರೆಸ್ ಪಕ್ಷಕ್ಕಾಗಿಯೇ ಬದುಕಿದರು, ಪಕ್ಷಕ್ಕಾಗಿಯೇ ಮಡಿದರು. ಒಂದು ವೇಳೆ ಸರ್ದಾರ್ ವಲ್ಲಭಭಾಯ್ ಪಟೇಲ್ ದೇಶದ ಮೊದಲ ಪ್ರಧಾನಿಯಾಗಿದ್ದರೆ ಕಾಶ್ಮೀರದ ಸಮಸ್ಯೆಯೇ ಉದ್ಘವಿಸುತ್ತಿರಲಿಲ್ಲ ಎಂದು ಹೇಳಿದರು.
ಗುಜರಾತ್ನಲ್ಲಿ ಚುನಾವಣೆ ನಡೆಯುವಾಗ ಹೊರತುಪಡಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಸರ್ದಾರ್ ಪಟೇಲರು ನೆನಪಾಗುವುದೇ ಇಲ್ಲ. ಎನ್ಡಿಎ ಸರ್ಕಾರ ನಿರ್ಮಿಸಿರುವ ಸರ್ದಾರ್ ಪಟೇಲರ ಪ್ರತಿಮೆಯನ್ನು ಎಲ್ಲ ಕಾಂಗ್ರೆಸ್ ನಾಯಕರು ಒಮ್ಮೆಯಾದರೂ ನೋಡಬೇಕು ಎಂದು ಮನವಿ ಮಾಡಿದರು.
ಯುದ್ಧಭೂಮಿಯಲ್ಲಿ ಸಿಟ್ಟು ತೋರಿಸಲು ಆಗದವರು ಸದನದಲ್ಲಿ ಸಿಟ್ಟು ತೋರಿಸಲು ಮುಂದಾಗುತ್ತಿದ್ದಾರೆ. ದೇಶವು ನಮಗೆ ಸೇವೆ ಮಾಡಲು ಅವಕಾಶ ಕೊಟ್ಟಿದೆ. ನಾನಂತೂ ದೇಶದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕಳೆದ ಕೆಲ ಚುನಾವಣೆಗಳು ದೇಶದ ಮತದಾರರ ಪ್ರೌಢಿಮೆಯನ್ನು ನಿರೂಪಿಸಿವೆ. ಯಾರು ಆಯ್ಕೆಯಾದರು ಎಂಬುದು ಮುಖ್ಯವಲ್ಲ, ಆದರೆ ಮತದಾರರು ಸ್ಥಿರ ಸರ್ಕಾರಗಳನ್ನು ರಚಿಸಲು ಆಶೀರ್ವಾದ ಮಾಡಿದ್ದಾರೆ ಎನ್ನುವುದು ಮುಖ್ಯ ಎಂದು ಮೋದಿ ಹೇಳಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್ ಹುಸಿ ಪ್ರತಿಷ್ಠೆಯಿಂದ ನಲುಗುತ್ತಿದೆ. ಇತ್ತೀಚೆಗಿನ ಲೋಕಸಭೆ ಚುನಾವಣೆಯಲ್ಲಿನ ತನ್ನ ಸೋಲನ್ನು ಭಾರತದ ಸೋಲೆಂದು ಹೇಳುವ ಮೂಲಕ ಮತದಾರರನ್ನು ಅಪಮಾನಿಸಿದೆ. ಬಿಜೆಪಿ ಮತ್ತದರ ಮೈತ್ರಿಕೂಟ ಚುನಾವಣೆಯಲ್ಲಿ ಗೆಲುವು ಸಾಧಿಸಿವೆ. ಆದರೆ, ರಾಷ್ಟ್ರಕ್ಕೆ ಸೋಲಾಗಿದೆ ಎಂಬ ಕಾಂಗ್ರೆಸ್ನ ನನ್ನ ಕೆಲವು ಮಿತ್ರರ ದುರದೃಷ್ಟಕರ ಹೇಳಿಕೆ ಕೇಳಿ ದುಃಖವಾಯಿತು. ಇದರರ್ಥ ತಾವು ಗೆಲ್ಲದಿದ್ದರೆ ಭಾರತ ಗೆಲ್ಲುವುದಿಲ್ಲ, ತಾವು ಗೆದ್ದರೆ ಮಾತ್ರ ಭಾರತ ಗೆಲ್ಲುತ್ತದೆ ಅಂತಾ ಕಾಂಗ್ರೆಸ್ ಭಾವಿಸಿದ್ದಂತೆ ಕಾಣುತ್ತದೆ ಎಂದು ಹೇಳಿದರು.
ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಕೆಲವರು ಆಕ್ಷೇಪ ಎತ್ತುತ್ತಿದ್ದಾರೆ. ಆದರೆ, ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಿ ಸಾಕಷ್ಟು ಚುನಾವಣೆಗಳನ್ನು ಮಾಡಲಾಗಿದೆ. ಇವಿಎಂ ಬಳಸಿ ನಡೆಸಿರುವ ಚುನಾವಣೆಗಳಲ್ಲಿ ಗೆದ್ದಿರುವ ರಾಜ್ಯಸಭೆಯಲ್ಲಿರುವ ಹಲವು ಪಕ್ಷಗಳು ಬೇರೆಬೇರೆ ರಾಜ್ಯಗಳಲ್ಲಿ ಆಡಳಿತವನ್ನೂ ನಡೆಸುತ್ತಿವೆ. ಆದರೂ ಇವಿಎಂಗಳ ಕಾರ್ಯಕ್ಷಮತೆ ಬಗ್ಗೆ ಕೆಲವು ಪಕ್ಷಗಳು ಇಂದು ಅನುಮಾನ ವ್ಯಕ್ತಪಡಿಸುತ್ತಿವೆ ಎಂದು ಹೇಳಿದರು.
ಕಳೆದ ಕೆಲವು ವರ್ಷಗಳಲ್ಲಿ ನಮ್ಮ ಚುನಾವಣಾ ಪ್ರಕ್ರಿಯೆಗಳು ಹೇಗೆ ಸುಧಾರಣೆಯಾಗಿವೆ ಎಂಬುದನ್ನು ನಾವು ಶ್ಲಾಘಿಸಬೇಕು. 1950ರಲ್ಲಿ ಚುನಾವಣಾ ಪ್ರಕ್ರಿಯೆ ಮುಗಿಯಲು ಬಹಳಷ್ಟು ಸಮಯ ತೆಗೆದುಕೊಳ್ಳುತ್ತಿತ್ತು ಮತ್ತು ಪ್ರತಿ ಮತಗಟ್ಟೆಯಲೂ ಹಿಂಸಾಚಾರ ನಡೆಯುತ್ತಿತ್ತು. ಈಗ ತಂತ್ರಜ್ಞಾನದಿಂದ ಮತದಾನ ಶಾಂತಿಯುತವಾಗಿ ಸುರಕ್ಷಿತವಾಗಿ ನಡೆಯುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದು ಹರ್ಷ ವ್ಯಕ್ತಪಡಿಸಿದರು.