ನವದೆಹಲಿ, ಜೂ 26 (Daijiworld News/MSP): ಪ್ರಧಾನಿ ಮೋದಿಯವರನ್ನು ಹೊಗಳಿದ್ದಕ್ಕಾಗಿ ಕಾಂಗ್ರೆಸ್ ಪಕ್ಷದಿಂದ ಅಮಾನತುಕೊಂಡಿದ್ದ ಕೇರಳದ ಮಾಜಿ ಸಂಸದ ಎ.ಪಿ ಅಬ್ದುಲ್ ಕುಟ್ಟಿ ಬುಧವಾರ ಬಿಜೆಪಿ ಪಕ್ಷದ ಕಾರ್ಯಾಧ್ಯಕ್ಷ, ಹಿರಿಯ ಮುಖಂಡ ಜೆ.ಪಿ. ನಡ್ಡಾ ಹಾಗೂ ಕೇರಳ ರಾಜ್ಯ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ , ರಾಜ್ಯಸಭೆ ಸದಸ್ಯರಾಗಿರುವ ವಿ. ಮುರಳೀಧರನ್ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು.
"ಅಧಿಕೃತವಾಗಿ ಬಿಜೆಪಿಯನ್ನು ನಾನು ಸೇರುವುದರೊಂದಿಗೆ ನನ್ನ ರಾಜಕೀಯ ಜೀವನದ ಹೊಸ ಇನಿಂಗ್ಸ್ ಅನ್ನು ಪ್ರಾರಂಭಿಸುತ್ತಿದ್ದೇನೆ ಎಂದು ಕುಟ್ಟಿ ಹೇಳಿದರು. ಇದೇ ವೇಳೆ ಅವರು ಬಿಜೆಪಿ ಮತ್ತು ಮುಸ್ಲಿಂ ಸಮುದಾಯದ ನಡುವೆ ಹಲವು ತಪ್ಪು ತಿಳಿವಳಿಕೆಗಳು ಇದ್ದು ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ" ಎಂದು ವಿವರಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ ಕಾರಣ ನೀಡಿ ಕೇರಳ ಕಾಂಗ್ರೆಸ್ ಘಟಕವು ಅಬ್ದುಲ್ಲ ಕುಟ್ಟಿ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು. ಲೋಕಸಭಾ ಚುನಾವಣೆಯ ನಂತರ ಅಬ್ದುಲ್ಲ ಕುಟ್ಟಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ನರೇಂದ್ರ ಮೋದಿಯವರ ಅಭಿವೃದ್ಧಿ ರಾಜಕಾರಣವನ್ನು ಹೊಗಳಿದ್ದರು. ಕಾಂಗ್ರೆಸಿನಿಂದ ಉಚ್ಚಾಟಣೆಗೊಂಡ ನಂತರ ಇವರು ಬಿಜೆಪಿ ಕೇರಳ ಘಟಕದ ನಾಯಕರನ್ನು ಭೇಟಿಮಾಡಿದ್ದರು. ಇದು ಅವರ ಬಿಜೆಪಿ ಸೇರ್ಪಡೆ ವದಂತಿಗೆ ಪುಷ್ಟಿ ನೀಡಿತ್ತು. ಇದಲ್ಲದೆ ಸೋಮವಾರದಂದು ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಸಿಪಿಐಎಂ ಪಕ್ಷದ ಕಾರ್ಯಕರ್ತನಾಗಿ ರಾಜಕೀಯ ಕ್ಷೇತ್ರಕ್ಕಿಳಿದ ಎ.ಪಿ ಅಬ್ದುಲ್ಲ ಕುಟ್ಟಿ ಇದೇ ಪಕ್ಷದ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ನಂತರ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆಂಬ ಕಾರಣಕ್ಕಾಗಿ ಸಿಪಿಐಎಂ ಪಕ್ಷದಿಂದ ಉಚ್ಚಾಟಿಸಲ್ಪಟ್ಟ ಇವರು ಕಾಂಗ್ರೆಸಿಗೆ ಸೇರ್ಪಡೆಗೊಂಡಿದ್ದರು.