ನವದೆಹಲಿ,ಜೂ26(DaijiworldNews/AZM):ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಇಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮತ್ತು ಅಮೆರಿಕದ ಪ್ರಧಾನ ಕಾರ್ಯದರ್ಶಿ ಮೈಕ್ ಪೋಂಪಿಯೋ ಅವರು ಇಂದು ಭೇಟಿಯಾಗಿದ್ದಾರೆ.
ಇರಾನ್ ಮತ್ತು ರಷ್ಯಾದೊಂದಿಗಿರುವ ಭಾರತದ ವ್ಯಾವಹಾರಿಕ ಸಂಬಂಧವು ಅಮೆರಿಕವನ್ನು ಇರಿಸುಮುರುಸುಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಈ ಭೇಟಿಯಾಗಿರುವುದು ಗಮನಾರ್ಹ. ಇದೇ ಹಿನ್ನೆಲೆಯಲ್ಲೇ ಈ ಭೇಟಿಯು ಸಾಕಷ್ಟು ಕುತೂಹಲ ಮೂಡಿಸಿದೆ. ಈ ವಾರಾಂತ್ಯದಲ್ಲಿ ಜಪಾನ್ನಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ ಅವರ ಭೇಟಿಗೆ ಪೂರ್ವಭಾವಿಯಾಗಿ ಇವತ್ತು ವಿದೇಶಾಂಗ ಸಚಿವರ ಮಾತುಕತೆ ನಡೆದಿದೆ.
ಮೈಕ್ ಪಾಂಪಿಯೋ ಅವರು ನಿನ್ನೆ ಮಂಗಳವಾರ ರಾತ್ರಿಯೇ ದೆಹಲಿಗೆ ಆಗಮಿಸಿದ್ದರು. ಇವತ್ತು ಬೆಳಗ್ಗೆ ಅವರು ಪ್ರಧಾನಿ ನರೇಂದ್ರ ಅವರನ್ನು ಭೇಟಿಯಾಗಿ ಕೆಲ ವಿಚಾರಗಳಲ್ಲಿ ಅಭಿಪ್ರಾಯ ಹಂಚಿಕೊಂಡರು ಎಂದು ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
ಇನ್ನು, ಭಾರತ ಮತ್ತು ಅಮೆರಿಕದ ವಿದೇಶಾಂಗ ಸಚಿವರು ತಮ್ಮಿಬ್ಬರ ಭೇಟಿಯ ಬಳಿಕ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ವ್ಯವಹಾರ ವಿಚಾರದಲ್ಲಿ ಸ್ನೇಹಿತರ ಮಧ್ಯೆ ಭಿನ್ನಾಭಿಪ್ರಾಯ ಇರುವುದು ಸಹಜ. ಅದನ್ನು ಕಾಲಾನುಕ್ರಮದಲ್ಲಿ ಬಗೆಹರಿಸಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.