ಬೆಂಗಳೂರು, ಜೂ 26 (Daijiworld News/SM): ದೇಶದಲ್ಲಿ ಪ್ರಜಾಪ್ರಭುತ್ವ ವಿರೋಧಿ ಯಾವುದೇ ಧೋರಣೆಗಳು ಉಳಿಯುವುದಿಲ್ಲ. ಇದಕ್ಕೆ ಕಾಂಗ್ರೆಸ್ ನ ಇಂದಿನ ದಯನೀಯ ಸ್ಥಿತಿಯೇ ಸಾಕ್ಷಿಯಾಗಿದೆ. ಜನ ವಿರೋಧಿ ನೀತಿ ಅನುಸರಿಸಿದ ಪರಿಣಾಮ ಆ ಪಕ್ಷ ಶೋಚನೀಯ ಸ್ಥಿತಿಗೆ ತಲುಪಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 44 ವರ್ಷಗಳ ಹಿಂದೆ ತುರ್ತು ಪರಿಸ್ಥಿತಿ ಹೇರುವ ಮೂಲಕ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಪ್ರಜಾತಂತ್ರ ವ್ಯವಸ್ಥೆಗೆ ದೊಡ್ಡ ಅಪಚಾರ ಎಸಗಿದ್ದರು. ಕಾಂಗ್ರೆಸ್ ನಾಯಕರು ಈಗಲೂ ಆತ್ಮಾವಲೋಕನ ಮಾಡಿಕೊಳ್ಳದೆ ಈಗಲೂ ಪ್ರಜಾತಂತ್ರ ವಿರೋಧಿ ನಡವಳಿಕೆ ತೋರುತ್ತಿದ್ದಾರೆ. ತುರ್ತು ಪರಿಸ್ಥಿತಿಯ ಕರಾಳ ನೆನಪು, ಇಂದಿರಾಗಾಂಧಿಯವರ ಸರ್ವಾಧಿಕಾರಿ ನೀತಿಯ ಪರಿಣಾಮ ಇಂದು ಕಾಂಗ್ರೆಸ್ ಮುಕ್ತ ಭಾರತವಾಗುತ್ತಿದೆ ಎಂದರು.