ಬೆಂಗಳೂರು,ಜೂ26(DaijiworldNews/AZM):ಕಾರ್ಮಿಕರು ಪ್ರತಿಭಟನೆ ಮಾಡಿ ಡ್ರಾಮಾ ಮಾಡಿದರು, ಆಗ ನಾನು ಕಾರ್ಮಿಕರ ಮೇಲೆ ಕೂಗಾಡಿ ತಪ್ಪು ಮಾಡಿದೆ, ಇನ್ನು ಮುಂದೆ ಹೀಗೆ ನಡೆದುಕೊಳ್ಳವುದಿಲ್ಲ ಎಂದು ಸಿಎಂ ಕುಮಾರಸ್ವಾಮಿಯವರು ಹೇಳಿದ್ದಾರೆ.
ಕುಮಾರಸ್ವಾಮಿಯವರು ಇಂದು ಬೆಳಿಗ್ಗೆ ಸಂಚರಿಸುತ್ತಿದ್ದ ವಾಹನಕ್ಕೆ ಕಾರ್ಮಿಕರು ಮುತ್ತಿಗೆ ಹಾಕಿದ್ದು, ಈ ಹಿನ್ನಲೆ ಕಾರ್ಮಿಕರ ವಿರುದ್ಧ ಸಿಎಂ ಅವರು ಕೂಗಾಡಿದ್ದರು. ಇದೀಗ 'ಕೂಗಾಡಿ ತಪ್ಪು ಮಾಡಿದೆ' ಎಂದು ಪಶ್ಚಾತಾಪ ಪಟ್ಟಿದ್ದಾರೆ.
ಕುಮಾರಸ್ವಾಮಿ ಅವರು ಕರೆಗುಡ್ಡ ಗ್ರಾಮಕ್ಕೆ ಬಸ್ಸಿನಲ್ಲಿ ಪ್ರಯಾಣಿಸಬೇಕಾದರೆ ವೈಟಿಪಿಎಸ್ನ ಕಾರ್ಮಿಕರು ಕುಮಾರಸ್ವಾಮಿ ಅವರು ಪ್ರಯಾಣಿಸುತ್ತಿದ್ದ ಬಸ್ಗೆ ಅಡ್ಡ ಬಂದು ಪ್ರತಿಭಟನೆ ನಡೆಸಿದರು.
ಈ ಸಮಯ ತಾಳ್ಮೆ ಕಳೆದುಕೊಂಡ ಕುಮಾರಸ್ವಾಮಿ ಅವರು, ನರೇಂದ್ರ ಮೋದಿಗೆ ವೋಟು ಹಾಕಿ, ನನ್ನನ್ನು ಕೇಳಲು ಬಂದಿದ್ದೀರಾ ಎಂದು ಹೇಳಿದರು. ಅಷ್ಟಕ್ಕೆ ಸುಮ್ಮನಾಗದೆ, ಪೊಲೀಸರು ನಿಮ್ಮ ಮೇಲೆ ಲಾಠಿ ಚಾರ್ಜ್ ಮಾಡಬೇಕಾ? ಎಂದು ಸಹ ಪ್ರಶ್ನೆ ಮಾಡಿದರು.
ಆದರೆ ಆ ನಂತರ ತಮ್ಮ ತಪ್ಪು ತಿದ್ದಿಕೊಂಡ ಸಿಎಂ ಕುಮಾರಸ್ವಾಮಿ ಅವರು, ಕಾರ್ಮಿಕರು ಪ್ರತಿಭಟನೆ ಮಾಡಿ ಡ್ರಾಮಾ ಮಾಡಿದರು, ಆಗ ನಾನು ಅವರ ಮೇಲೆ ಕೂಗಾಡಿ ತಪ್ಪು ಮಾಡಿದೆ, ಇನ್ನು ಮುಂದೆ ಹೀಗೆ ನಡೆದುಕೊಳ್ಳವುದಿಲ್ಲ ಎಂದು ಹೇಳಿದರು.
ಕುಮಾರಸ್ವಾಮಿ ಅವರು ರೇಗಾಡಿ ಆಡಿದ ಮಾತುಗಳಿಗೆ ರಾಜ್ಯದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದ್ದು, ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಕುಮಾರಸ್ವಾಮಿ ಅವರ ಮಾತುಗಳನ್ನು ಟೀಕಿಸಿದ್ದಾರೆ.