ನವದೆಹಲಿ, ಆ. 16 (DaijiworldNews/TA): ಅಕ್ಟೋಬರ್ 4 ರಿಂದ ಕೆಲವೇ ಗಂಟೆಗಳಲ್ಲಿ ಬ್ಯಾಂಕ್ಗಳು ಚೆಕ್ಗಳನ್ನು ಕ್ಲಿಯರ್ ಮಾಡುತ್ತವೆ ಎಂದು ಆರ್ಬಿಐ ತಿಳಿಸಿದೆ. ಬೆಳಿಗ್ಗೆ 10:00 ರಿಂದ ಸಂಜೆ 4:00 ರವರೆಗೆ ಒಂದೇ ಅವಧಿಯಲ್ಲಿ ಕ್ಲಿಯರಿಂಗ್ ಕೆಲಸ ನಡೆಯಲಿದೆ.

ಬ್ಯಾಂಕ್ಗಳಿಗೆ ಚೆಕ್ಗಳನ್ನು ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಕ್ಲಿಯರೆನ್ಸ್ ಮಾಡಲು ಆರ್ಬಿಐ ಅಕ್ಟೋಬರ್ 4ರಿಂದ ಹೊಸ ಕಾರ್ಯವಿಧಾನವನ್ನು ಪರಿಚಯಿಸಲಿದೆ, ಇದು ಪ್ರಸ್ತುತ ನಡೆಯುತ್ತಿರುವ ಎರಡು ಕೆಲಸದ ದಿನವನ್ನು ಕಡಿಮೆ ಮಾಡುತ್ತದೆ. ಚೆಕ್ಗಳನ್ನು ಕೆಲವು ಗಂಟೆಗಳಲ್ಲಿ, ವ್ಯವಹಾರದ ಸಮಯದಲ್ಲಿ ನಿರಂತರವಾಗಿ ಸ್ಕ್ಯಾನ್ ಮಾಡಿ ಪ್ರಸ್ತುತಪಡಿಸಲಾಗುತ್ತದೆ. ಕ್ಲಿಯರಿಂಗ್ ಸೈಕಲ್ ನ್ನು ಪ್ರಸ್ತುತ 1 ದಿನದಿಂದ ಇದೀಗ ಕೆಲವು ಗಂಟೆಗಳಿಗೆ ಇಳಿಸಲಾಗುತ್ತಿದೆ.
ಚೆಕ್ ಕ್ಲಿಯರಿಂಗ್ನ ದಕ್ಷತೆಯನ್ನು ಸುಧಾರಿಸಲು ಮತ್ತು ಚೆಕ್ ಡ್ರಾ ವನ್ನು ಸರಾಗವಾಗಿ ಮಾಡಲು ಇದು ಸಹಕಾರಿಯಾಗಿದೆ, ಶಾಖೆಗಳಿಂದ ಸ್ವೀಕರಿಸಲ್ಪಟ್ಟ ಚೆಕ್ಗಳನ್ನು ಪ್ರಸ್ತುತಿ ಅವಧಿಯಲ್ಲಿ ಬ್ಯಾಂಕುಗಳು ಸ್ಕ್ಯಾನ್ ಮಾಡಿ ಕ್ಲಿಯರಿಂಗ್ ಹೌಸ್ಗೆ ತಕ್ಷಣವೇ ಮತ್ತು ನಿರಂತರವಾಗಿ ಕಳುಹಿಸಬೇಕು ಎಂದು ಆರ್ಬಿಐ ತಿಳಿಸಿದೆ. ಚೆಕ್ ಕ್ಲಿಯರಿಂಗ್ ಪ್ರಕ್ರಿಯೆಯಲ್ಲಿನ ಬದಲಾವಣೆಗಳ ಬಗ್ಗೆ ತಮ್ಮ ಗ್ರಾಹಕರಿಗೆ ಸಮರ್ಪಕವಾಗಿ ಅರಿವು ಮೂಡಿಸುವಂತೆ ಆರ್ಬಿಐ ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ. ನಿಗದಿತ ದಿನಾಂಕಗಳಂದು ಸಿಟಿಎಸ್ನಲ್ಲಿ ನಿರಂತರ ಕ್ಲಿಯರಿಂಗ್ನಲ್ಲಿ ಭಾಗವಹಿಸಲು ಬ್ಯಾಂಕುಗಳು ಸಿದ್ಧರಾಗಿರುವಂತೆ ತಿಳಿಸಿದೆ.