ಬೆಂಗಳೂರು, ಜೂ27(Daijiworld News/SS): ಗ್ರಾಮವಾಸ್ತವ್ಯ ಪ್ರತಿಭಟನೆಯಲ್ಲಿ ಬಿಜೆಪಿಯವರ ಷಡ್ಯಂತ್ರವಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮವಾಸ್ತವ್ಯ ವೈಖರಿ ನೋಡಿ ಸಹಿಸಿಕೊಳ್ಳದ ಯಾವುದೋ ಒಂದು ಶಕ್ತಿ ಉತ್ತಮ ಕೆಲಸಕ್ಕೆ ಅಡಚಣೆ ಮಾಡುತ್ತಿದೆ. ಗ್ರಾಮವಾಸ್ತವ್ಯವನ್ನು ಬಿಜೆಪಿಯ ನಾಯಕರು ನೇರವಾಗಿ ವಿರೋಧಿಸುತ್ತಿದ್ದಾರೆ. ಈ ಕುರಿತ ಪ್ರತಿಭಟನೆಯಲ್ಲಿ ಬಿಜೆಪಿ ಷಡ್ಯಂತ್ರವಿದೆ. ಕುಮಾರಸ್ವಾಮಿ ನಿನೂತನ ರೀತಿಯಲ್ಲಿ ಗ್ರಾಮವಾಸ್ತವ್ಯ ಮಾಡಲು ಹೊರಟಿರುವುದನ್ನು ಸಹಿಸದವರು ಈ ರೀತಿ ಪ್ರತಿಭಟನೆ ಮಾಡಿಸುವ ಮೂಲಕ ಅಡ್ಡಿಪಡಿಸುತ್ತಿದ್ದಾರೆ ಎಂದು ದೂರಿದರು.
ಜನರ ಸಮಸ್ಯೆಗಳನ್ನು ಪರಿಹರಿಸಲು ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಆದರೆ ದಾರಿ ಮಧ್ಯದಲ್ಲಿ ಈ ರೀತಿ ಪ್ರತಿಭಟನೆ ಮಾಡಿದರೆ ಅವರು ಏನು ಮಾಡಲು ಸಾಧ್ಯ. ಕುಮಾರಸ್ವಾಮಿ ಅವರು ಕರೆಗುಡ್ಡಕ್ಕೆ ತಲುಪುವ ಮೊದಲೇ ಮಧ್ಯದಲ್ಲಿ ತಡೆದು ಸ್ಥಳದಲ್ಲಿಯೇ ಕೆಲಸ ಮಾಡಿಕೊಡಿ ಎಂದು ಪಟ್ಟುಹಿಡಿಯುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಕರೆಗುಡ್ಡದಲ್ಲಿ ಮುಖ್ಯಮಂತ್ರಿಯವರ ಪೂರ್ಣಕುಂಭ ಸ್ವಾಗತಕ್ಕೆ ಜನ ಕಾಯುತ್ತಿರುವ ಸಂದರ್ಭದಲ್ಲಿಯೇ ಏಕಾಏಕಿ ಸಾವಿರಾರು ಜನ ಅವರನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಏಕೆ ಹೀಗೆ ಮಾಡುತ್ತಿದ್ದೀರಾ?, ಲಾಠಿ ಚಾರ್ಜ್ ಮಾಡಿಸೇಕೆ ಎಂದು ಒಲ್ಲದ ಮನಸ್ಸಿನಿಂದ ಕೇಳಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಕುಮಾರಸ್ವಾಮಿ ಸರ್ಕಾರದ ಆಡಳಿತ ಯಂತ್ರವನ್ನು ಸಮರ್ಪಕವಾಗಿ ನಿಭಾಯಿಸುವ ಜೊತೆಗೆ ಗ್ರಾಮ ವಾಸ್ತವ್ಯದ ಮೂಲಕ ಜನರ ಸಮಸ್ಯೆಯನ್ನೂ ಆಲಿಸುತ್ತಿದ್ದಾರೆ. ಹೀಗಿದ್ದರೂ ಅವರಿಗೆ ತೊಂದರೆ ಕೊಡುವುದು ಸರಿಯೇ ಎಂದು ಪ್ರಶ್ನಿಸಿದರು.
ರೈತರ ಸಾಲಮನ್ನಾ ಮಾಡಲು ಮುಂದಾಗದ ಬಿಜೆಪಿ ನಾಯಕರು, ವರ್ಷಕ್ಕೆ ರೈತರಿಗೆ 6 ಸಾವಿರ ಕೊಟ್ಟು ದೇಶಾದ್ಯಂತ ಪ್ರಚಾರ ಪಡೆಯುತ್ತಾರೆ. ಸದಾಕಾಲ ಜನರನ್ನು ಮೋಸಗೊಳಿಸಲು ಸಾಧ್ಯವಿಲ್ಲ. ವಿನಾಕಾರಣ ಆರೋಪ ಮಾಡಲು ನಮಗೂ ಬರುತ್ತದೆ ಎಂದು ಕಿಡಿಕಾರಿದರು.