ಜಮ್ಮು-ಕಾಶ್ಮೀರ, ಜೂ27(Daijiworld News/SS): ಪುಲ್ವಾಮಾ ದಾಳಿ ಬಳಿಕ ಜಮ್ಮು ಕಾಶ್ಮೀರದಲ್ಲಿನ ಒಟ್ಟಾರೇ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿರುವ ಅಮಿತ್ ಶಾ, ಜುಲೈ 1 ರಿಂದ ಪ್ರಾರಂಭವಾಗಲಿರುವ ವಾರ್ಷಿಕ ಅಮರಾನಾಥ ಯಾತ್ರೆಯ ವೇಳೆ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಮರನಾಥ ಯಾತ್ರೆ ವೇಳೆ ಪುಲ್ವಾಮ ಮಾದರಿಯ ದಾಳಿ ನಡೆಯಬಹುದೆಂಬ ಮಾಹಿತಿ ಹಿನ್ನೆಲೆಯಲ್ಲಿ ಈ ಹಿಂದೆಂದಿಗಿಂತಲೂ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಜಮ್ಮು-ಕಾಶ್ಮೀರದ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳು ಸೇರಿದಂತೆ ಯಾತ್ರೆಯ ಮಾರ್ಗದುದ್ದಕ್ಕೂ ಭದ್ರತೆ ಏರ್ಪಡಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರವನ್ನು ಸಂಪರ್ಕಿಸುವ ಜವಾಹರ್ ಸುರಂಗ ಮಾರ್ಗದಲ್ಲಿಯೂ ಹೆಚ್ಚಿನ ನಿಗಾ ವಹಿಸಲಾಗಿದೆ.
ಉಗ್ರರು ವಾಹನಗಳಲ್ಲಿ ಸುಧಾರಿತ ಸ್ಫೋಟಕ (ಐಇಡಿ) ತುಂಬಿಕೊಂಡು ಬಂದು ದಾಳಿ ನಡೆಸುವ ಹಾಗೂ ವಾಹನಗಳಲ್ಲಿ ಗೌಪ್ಯವಾಗಿ ಸುಧಾರಿತ ಸ್ಫೋಟಕಗಳನ್ನು ಇರಿಸಿ ಅವುಗಳನ್ನು ಸೇನಾ ಗಸ್ತು ವಾಹನಗಳ ಬಳಿ ಸ್ಫೋಟಿಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಈ ನಡುವೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಮ್ಮು- ಕಾಶ್ಮೀರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಣಿವೆ ರಾಜ್ಯಕ್ಕೆ ಮೊದಲ ಬಾರಿಗೆ ಭೇಟಿ ನೀಡಿ, ಭದ್ರತಾ ವ್ಯವಸ್ಥೆಯನ್ನು ಪರಾಮರ್ಶೆ ನಡೆಸಿದ್ದಾರೆ. ಮಾತ್ರವಲ್ಲ, ನಾಗರಿಕ ಆಡಳಿತಾಧಿಕಾರಿಗಳು ಹಾಗೂ ಭದ್ರತಾ ಏಜೆನ್ಸಿಯ ವಿವಿಧ ಉನ್ನತ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿನ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ ಅಮಿತ್ ಶಾ, ಜುಲೈ 1 ರಿಂದ ಪ್ರಾರಂಭವಾಗಲಿರುವ ವಾರ್ಷಿಕ ಅಮರಾನಾಥ ಯಾತ್ರೆ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಜುಲೈ 1ರಿಂದ 46 ದಿನಗಳ ಯಾತ್ರೆ ಆರಂಭಗೊಳ್ಳಲಿದೆ. ಯಾತ್ರೆಯು ಎರಡು ಮಾರ್ಗಗಳಲ್ಲಿ ಸಾಗಲಿದೆ. ಅನಂತ್ನಾಗ್ ಜಿಲ್ಲೆಯ ಪಹಲ್ಗಾಂವ್ನ ಸಾಂಪ್ರದಾಯಿಕ ಮಾರ್ಗ ಮತ್ತು ಗಂದೇರ್ಬಾಲ್ ಜಿಲ್ಲೆಯ ಬಾಲ್ತಲ್ನ ತ್ವರಿತ ಮಾರ್ಗ. ಈ ಎರಡೂ ಮಾರ್ಗಗಳಲ್ಲಿ ಜುಲೈ 1ರಿಂದ ಯಾತ್ರೆ ಆರಂಭಗೊಳ್ಳಲಿದ್ದು, ರಕ್ಷಾ ಬಂಧನದ ದಿನವಾದ ಆಗಸ್ಟ್ 15ರಂದು ಮುಕ್ತಾಯಗೊಳ್ಳಲಿದೆ.