ಇಂದೋರ್, ಜೂ 27 (Daijiworld News/MSP): ಇಂದೋರ್ ನ ಪುರಸಭೆಯ ಅಧಿಕಾರಿಯೊಬ್ಬರ ಮೇಲೆ ಕ್ರಿಕೆಟ್ ಬ್ಯಾಟ್ ನಿಂದ ಥಳಿಸಿ , ಹಲ್ಲೆ ಮಾಡಿದ್ದ ಬಿಜೆಪಿ ಹಿರಿಯ ನಾಯಕ ಕೈಲಾಶ್ ವಿಜಯ್ ವರ್ಗೀಯ ಅವರ ಪುತ್ರ, ಇಂದೋರ್-3 ಕ್ಷೇತ್ರದ ಶಾಸಕ ಆಕಾಶ್ ವಿಜಯ್ ವರ್ಗೀಯ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪುರಸಭೆಯ ಅಧಿಕಾರಿಗಳು ಹಳೆಯ ಕಟ್ಟಡ ತೆರವು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ವೇಳೆ ಇದನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಆಗ ಅಲ್ಲಿಗೆ ಆಗಮಿಸಿದ್ದ ಶಾಸಕ ಆಕಾಶ್ ವಿಜಯ್ ವರ್ಗೀಯ, ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಸೂಚಿಸಿದರು. ಇದರೆ ಇದಕ್ಕೆ ಬಗ್ಗದ ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದ ಶಾಸಕರು, ಏಕಾಏಕಿ ಸಿಟ್ಟುಕೊಂಡ ಶಾಸಕ ಕ್ರಿಕೆಟ್ ಬ್ಯಾಟ್ ಹಿಡಿದು ಅಧಿಕಾರಿಗೆ ಥಳಿಸಿದ್ದರು.. ಈ ಎಲ್ಲ ಘಟನೆಗಳು ಸ್ಥಳದಲ್ಲಿದ್ದ ಮಾಧ್ಯಮದ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಶಾಸಕ ಆಕಾಶ್ ವಿಜಯವರ್ಗೀಯ ಮತ್ತು ಅವರ ಬೆಂಬಲಿಗರು ಹಲ್ಲೆ ನಡೆಸುತ್ತಿದ್ದಂತೆಯೇ ಸ್ಥಳದಲ್ಲಿದ್ದ ಪೊಲೀಸರ ತಂಡ ತಕ್ಷಣ ಪರಿಸ್ಥಿತಿ ಹತೋಟಿಗೆ ತಂದಿದ್ದರು. ಆದರೆ ತಮ್ಮ ವರ್ತನೆಯನ್ನು ಸಮರ್ಥಿಸಿದ ಅಕಾಶ್ " ದಬ್ಬಾಳಿಕೆ ವಿರೋಧಿಸುವುದು ನಮಗೆ ಚೆನ್ನಾಗಿ ತಿಳಿದಿದ್ದು, ಮೊದಲು ಸಾಮ ಬಳಿಕ ದಂಡ ಎಂದಿದ್ದರು. ಪುರಸಭೆ ಅಧಿಕಾರಿಗಳು ಅನಗತ್ಯವಾಗಿ ಜನರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದ್ದರು.