ಫರಿದಾಬಾದ್, ಜೂ 27 (Daijiworld News/MSP): ಹರಿಯಾಣದ ಕಾಂಗ್ರೆಸ್ ವಕ್ತಾರ ವಿಕಾಸ್ ಚೌಧರಿ (38) ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ, ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ದೆಹಲಿಯ ಬಳಿ ಫರಿದಾಬಾದ್ನ ಸೆಕ್ಟರ್ 9ರಲ್ಲಿರುವ ಜಿಮ್ನಿಂದ ವಾಪಾಸ್ ಬರುತ್ತಿದ್ದ ಸಂದರ್ಭ ವಿಕಾಸ್ ಚೌಧರಿ ಬಳಿ ಬಂದ ಮಾರುತಿ ಕಾರಿನಲ್ಲಿದ್ದ ನಾಲ್ವರು ಏಕಾಏಕಿ ವಿಕಾಸ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದುಷ್ಕರ್ಮಿಗಳ ಗುಂಡಿನ ದಾಳಿ ಪರಿಣಾಮ ಸುಮಾರು 10 ಬುಲೆಟ್ಗಳು ವಿಕಾಸ್ ಚೌಧರಿಯವರ ದೇಹ ಹೊಕ್ಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸಲಿಲ್ಲ.
ಆರೋಪಿಯೂ, ವಿಕಾಸ್ ರನ್ನು ಈ ಹಿಂದೆಯೂ ಹಿಂಬಾಲಿಸಿಕೊಂಡು ಬಂದಿರುವುದು ತಿಳಿದುಬಂದಿದ್ದು ಇದು ವೈಯಕ್ತಿಕ ಕಾರಣಗಳಿಗೆ ಹತ್ಯೆಯಾಗಿರುವಂತೆ ತೋರುತ್ತದೆ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಗುಂಡಿನ ದಾಳಿ ನಡೆಸಿರುವ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ. ವಿಕಾಸ್ ಚೌಧರಿ ಈ ಮೊದಲು ಇಂಡಿಯನ್ ನ್ಯಾಷನಲ್ ಲೋಕ ದಳ್ದಲ್ಲಿ ಇದ್ದವರು. ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.
" ಹರಿಯಾಣ ಕಾಂಗ್ರೆಸ್ ವಕ್ತಾರ ವಿಕಾಸ್ ಚೌಧರಿ ಅವರ ಬರ್ಬರ ಹತ್ಯೆ ಅತ್ಯಂತ ಅಮಾನುಷ ಕೃತ್ಯ.ಬಿಜೆಪಿಯ ಜಂಗಲ್ ರಾಜ್ ಆಡಳಿತ ವ್ಯವಸ್ಥೆ ರಾಜ್ಯವಾಳುತ್ತಿದೆ. ರಾಜ್ಯದಲ್ಲಿ ಯಾರಿಗೂ ಕಾನೂನಿನ ಭಯವಿಲ್ಲದಂತಾಗಿದೆ.ಹಾಗಾಗಿ ಇಂತಹ ಘಟನೆಗಳು ಇತ್ತೀಚೆಗೆ ತೀರಾ ಸಹಜವಾಗಿವೆ. ವಿಕಾಸ್ ಹತ್ಯೆ ಪ್ರಕರಣದ ತನಿಖೆಯಾಗಲಿ" ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.