ನವದೆಹಲಿ, ಜೂ 27 (Daijiworld News/MSP): ಅಮರನಾಥ ಯಾತ್ರೆಯ ಯಾತ್ರಾರ್ಥಿಗಳಿಗೆ ಹಿಂದೆಂದಿಗಿಂತಲೂ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಅಮರನಾಥ ಯಾತ್ರೆಯ ಮೇಲೆ ಪುಲ್ವಾಮ ಮಾದರಿಯಲ್ಲಿ ದಾಳಿ ನಡೆಯಬಹುದೆಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಈ ವಿಶೇಷ ಭದ್ರತೆ ಕೈಗೊಳ್ಳಲಾಗಿದೆ.
ಜೂ 30 ರಂದು ಜಮ್ಮು ಬೇಸ್ ಕ್ಯಾಂಪ್ ನಿಂದ ಅಮರನಾಥ ಯಾತ್ರೆಯ ಮೊದಲ ಬ್ಯಾಚ್ ಪ್ರಯಾಣ ಆರಂಭಿಸಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಜಮ್ಮುವಿನಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಇನ್ನು ಪರಿಸ್ಥಿತಿಯನ್ನು ಮೇಲ್ವಿಚಾರಣೆ ನಡೆಸಲೆಂದು ಭದ್ರತಾ ಪಡೆಗಳು ಡ್ರೋನ್ಗಳನ್ನು ಬಳಸುತ್ತಿವೆ.
ಇದರೊಂದಿಗೆ ಜಮ್ಮು-ಕಾಶ್ಮೀರದ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳು ಸೇರಿದಂತೆ ಯಾತ್ರೆಯ ಮಾರ್ಗದುದ್ದಕ್ಕೂ ಭದ್ರತೆ ಏರ್ಪಡಿಸಲಾಗಿದೆ. ಮಾತ್ರವಲ್ಲದೆ ಯಾತ್ರಾರ್ಥಿಗಳಿಗೆ ಸಹಕಾರಿಯಾಗುವಾಗುವಂತೆ ಅಮರನಾಥ ದೇವಸ್ಥಾನದ ಆಡಳಿತ ಮಂಡಳಿಯೂ ವಿಶೇಷ ಆಪ್ ಅನ್ನು ವಿನ್ಯಾಸಗೊಳಿಸಿದೆ. ಈ ಅಪ್ಲಿಕೇಶನ್ ಅನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಷ್ಟ್ರೀಯ ಇ-ಆಡಳಿತ ವಿಭಾಗ (NeGD) ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ. ಇದರಲ್ಲಿ ಗುಹೆ ದೇಗುಲದಲ್ಲಿ ಲಭ್ಯವಿರುವ ಸೌಲಭ್ಯ , ಹವಾಮಾನ ಮುನ್ಸೂಚನೆಗಳು, ಮಾರ್ಗ ಮಾಹಿತಿ, ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳು, ಆರೋಗ್ಯ ಸಂಬಂಧಿತ ಮಾಹಿತಿ ಇದೆ. ಯಾತ್ರಿಗಳಿಗೆ ನೀಡಿದ ಪರವಾನಿಗೆ ಸಂಖ್ಯೆ ಬಳಸಿ ಲಾಗ್ ಇನ್ ಆದರೆ, ಯಾತ್ರಿಕರ ಚಲನವಲನವನ್ನು ಸಂಬಂಧಿಸಿದವರು ಲೈವ್ ಆಗಿ ನೋಡಬಹುದು. ಇದರಿಂದಾಗಿ ಎಂಥಹ ತುರ್ತು ಪರಿಸ್ಥಿತಿಯಲ್ಲಿ ಶೀಘ್ರವಾಗಿ ಅಗತ್ಯ ಸಹಾಯ ಮಾಡಲು ನೆರವಾಗುತ್ತದೆ.