ಬೀದರ್, ಜೂ27(DaijiworldNews/AZM): ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು ಇಂದು ವಿಕಲಚೇತನರ ಸಮಸ್ಯೆಗಳನ್ನು ಆಲಿಸಿ ಅವರಿಗೆ ಸ್ಥಳದಲ್ಲೇ ಪರಿಹಾರವನ್ನು ನೀಡಿದ್ದಾರೆ.
ಬೀದರ್ ನಲ್ಲಿ ಜನತಾದರ್ಶನಕ್ಕೆ ಆಗಮಿಸಿದ ಸಿಎಂ, ವಿಕಲಚೇತನ ಸಹೋದರನೊಂದಿಗೆ ಆಗಮಿಸಿದ ವಿದ್ಯಾರ್ಥಿನಿಯೊಬ್ಬಳು ತನ್ನ ತಮ್ಮನ ಆರೋಗ್ಯಕ್ಕೆ ಅಗತ್ಯ ಚಿಕಿತ್ಸೆ ಕೊಡಿಸಬೇಕು. ನಾನು ಪಿಯುಸಿನಲ್ಲಿ ಶೇ. 94ರಷ್ಟು ಅಂಕ ಪಡೆದು ತೇರ್ಗಡೆಯಾಗಿದ್ದು, ಕೃಷಿ ಪದವಿಯಲ್ಲಿ ಅಧ್ಯಯನ ಮಾಡಲು ಅವಕಾಶ ನೀಡಿ ಎಂದು ಕೋರಿದಳು. ಸೋದರ ಸೋದರಿಯರ ಸಂಕಷ್ಟಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಬಿಎಸ್ ಸಿ ಪದವಿ ಓದಿಸಲು ಅಗತ್ಯ ನೆರವು ನೀಡುವುದಾಗಿ ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಜೊತೆಗೆ ಅವರಿಗೆ ಎರಡು ಲಕ್ಷ ರೂ ಬಿಡುಗಡೆ ಮಾಡಿದರು.
ಊರುಗೋಲು ಹಿಡಿದುಕೊಂಡು ಮುಖ್ಯಮಂತ್ರಿ ಅವರ ಬಳಿಬಂದ ಕೆಲವು ವಿಕಲಚೇತನರಿಗೆ ವಿಕಲಚೇತನರ ಇಲಾಖೆಯ ಮೂಲಕ ಊರುಗೋಲು ಕೊಡಿಸುವುದಾಗಿ ತಿಳಿಸಿದರು.
ಕಿಡ್ನಿ ವೈಫಲ್ಯ, ಹೃದಯ ಕಾಯಿಲೆ ಇರುವವರ ಅಹವಾಲು ಆಲಿಸಿದ ಮುಖ್ಯಮಂತ್ರಿಯವರು, ಜಯದೇವ ಮತ್ತು ನೆಪ್ರೋ ಯುರಾಲಜಿ ಇನಸ್ಟಿಟ್ಯೂಟ್ ಗಳ ನಿರ್ದೇಶಕರಿಗೆ ದೂರವಾಣಿ ಮೂಲಕ ಮಾತನಾಡಿ ಅಗತ್ಯ ಚಿಕಿತ್ಸೆ ಕೊಡಲು ಸೂಚಿಸಿದರು.ಆರು ಜನರಿಗೆ ಅಂಗವಿಕಲರ ಪರಿಹಾರ ನಿಧಿಯಲ್ಲಿ ಪರಿಹಾರ ಘೋಷಣೆ ಮಾಡಿದರು.