ಮುಂಬೈ,ಜೂ27(DaijiworldNews/AZM): ಮರಾಠ ಸಮುದಾಯದವರಿಗೆ ಮೀಸಲಾತಿ ಕಲ್ಪಿಸಲು ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ.
ನ್ಯಾ| ರಂಜಿತ್ ಮೋರೆ ಮತ್ತು ನ್ಯಾ| ಭಾರತಿ ದಾಂಗ್ರೆ ಅವರಿದ್ದ ವಿಭಾಗೀಯ ಪೀಠ ಎಷ್ಟು ಪ್ರಮಾಣದಲ್ಲಿ ಮರಾಠರಿಗೆ ಮೀಸಲಾತಿ ನೀಡಬೇಕೆಂದು ಸೂಚಿಸುವುದಾಗಿ ತಿಳಿಸಿದೆ.
ಮಹಾರಾಷ್ಟ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಬಳಿಕ ಉಚ್ಚ ನ್ಯಾಯಾಲಯ ಈ ತೀರ್ಪು ನೀಡಿದೆ. ಆದರೆ, ಶೇ. 16ರಷ್ಟು ಪ್ರಮಾಣದಲ್ಲಿ ಆ ಸಮುದಾಯದವರಿಗೆ ಮೀಸಲಾತಿ ನೀಡಿರುವುದಕ್ಕೆ ಮಾತ್ರ ಕೋರ್ಟ್ ಅಸಮ್ಮತಿ ಸೂಚಿಸಿದೆ.
ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗ ವಿಭಾಗದ ಅಡಿಯಲ್ಲಿ ಮರಾಠ ಸಮುದಾಯದವರಿಗೆ ಶೇ. 16ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಗೆ ಮಹಾರಾಷ್ಟ್ರ ವಿಧಾನಸಭೆ ಅನುಮೋದನೆ ನೀಡಿತ್ತು. ಕಳೆದ ವರ್ಷದ ನವೆಂಬರ್ 30ರಂದು ಪಾಸ್ ಆದ ಈ ಮಸೂದೆಯು ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮರಾಠರಿಗೆ ಮೀಸಲಾತಿ ಅವಕಾಶ ಕಲ್ಪಿಸುತ್ತದೆ.
ದೀರ್ಘ ಕಾಲದಿಂದ ಹಿಂದುಳಿದಿರುವ ಮರಾಠ ಸಮುದಾಯದವರ ಔನ್ನತ್ಯಕ್ಕಾಗಿ ಈ ಮೀಸಲಾತಿ ಅಗತ್ಯವಾಗಿದೆ ಎಂದು ಸರಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.