ನವದೆಹಲಿ,ಜೂ27(DaijiworldNews/AZM): ಚೊಚ್ಚಲ ಬಜೆಟ್ ಮಂಡನೆಗೂ ಮುನ್ನ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಇಂದು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಹಣಕಾಸು ಸಚಿವಾಲಯದ ಮೂಲಗಳು ಇದೊಂದು ಔಪಚಾರಿಕೆ ಭೇಟಿ ಎಂದು ತಿಳಿಸಿವೆ. ನಿರ್ಮಲಾ ಸೀತಾರಾಮನ್ ಅವರು ವಿತ್ತ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿದ್ದು ಇದೇ ಮೊದಲ ಬಾರಿಯಾಗಿದೆ. ಸೀತಾರಾಮನ್ ಅವರು ಮೊದಲ ಬಾರಿಗೆ ಜುಲೈ ಐದರಂದು ಬಜೆಟ್ ಮಂಡಿಸಲಿದ್ದಾರೆ.
ಮೂರು ದಶಕಗಳ ಕಾಲ ರಾಜ್ಯಸಭಾ ಸದಸ್ಯರಾಗಿದ್ದ ಮನಮೋಹನ್ ಸಿಂಗ್ ಅವರ ಸದಸ್ಯತ್ವ ಕಳೆದ ತಿಂಗಳು ಮುಕ್ತಾಯವಾಗಿದೆ. ನನ್ನನ್ನು ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ (ಆಕಸ್ಮಿಕ ಪ್ರಧಾನಿ) ಎಂದು ಕರೆಯಲಾಗುತ್ತದೆ. ಆದರೆ, ನಾನು ಆ್ಯಕ್ಸಿಡೆಂಟಲ್ ಫೈನಾನ್ಸ್ ಮಿನಿಸ್ಟರ್ (ಆಕಸ್ಮಿತ ವಿತ್ತ ಸಚಿವ) ಕೂಡ ಹೌದು ಎಂದು ಡಾ.ಸಿಂಗ್ ಕಳೆದ ವರ್ಷ ಡಿಸೆಂಬರ್ನಲ್ಲಿ ತಮ್ಮ ಚೆಂಜಿಂಗ್ ಇಂಡಿಯಾ ಪುಸ್ತಕ ಬಿಡುಗಡೆ ವೇಳೆ ಹೇಳಿದ್ದರು.
ಕಳೆದ ಮೂವತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮನಮೋಹನ್ ಸಿಂಗ್ ಸದನದಲ್ಲಿ ಇಲ್ಲದೇ ಬಜೆಟ್ ಅಧಿವೇಶನ ನಡೆಯುತ್ತಿದೆ.