ಇಂದೋರ್, ಸೆ. 04 (DaijiworldNews/AA): ನವಜಾತ ಹೆಣ್ಣುಶಿಶುವೊಂದನ್ನು ಇಲಿಗಳು ಕಚ್ಚಿ ಸಾವನ್ನಪ್ಪಿದ ಘಟನೆ ಇಂದೋರ್ನ ಮಹಾರಾಜ ಯಶವಂತರಾವ್ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ನಡೆದಿದೆ.

'ಸೆಪ್ಟಿಸೆಮಿಯಾದಿಂದ (ರಕ್ತದಲ್ಲಿ ವಿಷಕಾರಿ ಅಂಶ ಪತ್ತೆಯಾಗುವುದು) ಶಿಶು ಮೃತಪಟ್ಟಿದೆ' ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ. 'ಶಿಶುವು ಕೇವಲ 1.6 ಕೆ.ಜಿ. ತೂಕವಿತ್ತು. ಏಳು ದಿನಗಳ ಹಿಂದಷ್ಟೇ ಶಿಶುವಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಸೆಪ್ಟಿಸೆಮಿಯಾ ಕಾರಣದಿಂದ ಮಗುವಿನ ಆರೋಗ್ಯವು ತೀವ್ರ ಹದಗೆಟ್ಟಿತ್ತು. ಶಿಶುವಿಗೆ ಹುಟ್ಟುದಾಗಲೇ ಹಲವು ಸಮಸ್ಯೆಗಳಿದ್ದವು. ಕರುಳಿನಲ್ಲಿಯೂ ಸಮಸ್ಯೆ ಇತ್ತು' ಎಂದು ಆಸ್ಪತ್ರೆಯ ಉಪ ಸೂಪರಿಂಟೆಂಡೆಂಟ್ ಡಾ. ಜಿತೇಂದ್ರ ವರ್ಮಾ ತಿಳಿಸಿದರು.
ಕುಟುಂಬಸ್ಥರ ಕೋರಿಕೆ ಮೇರೆಗೆ ಶಿಶುವಿನ ಮರಣೋತ್ತರ ಪರೀಕ್ಷೆ ನಡೆಸಲಿಲ್ಲ. ಮೃತದೇಹವನ್ನು ಹಾಗೆಯೇ ಹಸ್ತಾಂತರಿಸಲಾಯಿತು. ಶಿಶುವಿನ ಎಡಗೈನ ಎರಡು ಬೆರಳುಗಳನ್ನು ಇಲಿಗಳು ಕಚ್ಚಿದ್ದವು. ಇದರಿಂದ ಬೆರಳುಗಳಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದವು. ಇಲಿಗಳು ಕಚ್ಚಿದ್ದ ಮತ್ತೊಂದು ನವಜಾತ ಶಿಶು ಮಂಗಳವಾರ ಮೃತಪಟ್ಟಿತ್ತು. ಈ ಮಗುವಿಗೂ ಹುಟ್ಟುವಾಗಲೇ ಹಲವು ಸಮಸ್ಯೆಗಳಿದ್ದವು. ನ್ಯುಮೋನಿಯಾ ಸೋಂಕಿನಿಂದ ಶಿಶು ಮೃತಪಟ್ಟಿತ್ತು' ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದರು.
ಈ ಪ್ರಕರಣ ಸಂಬಂಧ ಇಬ್ಬರು ನರ್ಸ್ಗಳನ್ನು ಮಂಗಳವಾರ ಅಮಾನತು ಮಾಡಲಾಗಿತ್ತು. ಎರಡೂ ಶಿಶುಗಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದರಿಂದ ಐಸಿಯುನಲ್ಲಿ ಇಡಲಾಗಿತ್ತು.