ಬೆಂಗಳೂರು,ಸೆ. 04 (DaijiworldNews/AK): ನಿನ್ನೆ ಸಂಜೆ ದೇಶದ 56ನೇ ಜಿ.ಎಸ್.ಟಿ. ಕೌನ್ಸಿಲ್ ಸಭೆ ಪೂರ್ಣಗೊಂಡು ಐತಿಹಾಸಿಕವಾದ ಜಿಎಸ್ಟಿ ಸುಧಾರಣೆಗಳನ್ನು ದೇಶದ ವಿತ್ತ ಸಚಿವರು ಘೋಷಿಸಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಅವರು ತಿಳಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ತಿಂಗಳು ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯಿಂದ ದೇಶದ ಜನರಿಗೆ ಜಿಎಸ್ಟಿಯಲ್ಲಿ ಆಮೂಲಾಗ್ರ ಪರಿವರ್ತನೆ ತರುವುದಾಗಿ ಹೇಳಿದ್ದರು., ಬಡವರು, ಶ್ರೀಸಾಮಾನ್ಯರು, ರೈತರಿಗೆ ಚಿಕ್ಕಚಿಕ್ಕ ಉದ್ಯಮ ಮಾಡುವ ಸ್ವಯಂ ಉದ್ಯೋಗಿಗಳಿಗೆ, ಎಂಎಸ್ಎಂಇಗಳು ಮತ್ತು ವಿಶೇಷವಾಗಿ ದೇಶದ ಯುವಕರಿಗೆ ಸಹಾಯ ಆಗುವಂಥ ದೃಷ್ಟಿಯಿಂದ ಜಿಎಸ್ಟಿಯಲ್ಲಿ ದೊಡ್ಡ ಪರಿವರ್ತನೆ ತರುವ ಭರವಸೆ ಕೊಟ್ಟಿದ್ದರು ಎಂದು ತಿಳಿಸಿದರು.
ಪ್ರಧಾನಮಂತ್ರಿಗಳ ಆಶಯ ಮತ್ತು ಅವರ ದೂರದೃಷ್ಟಿಯ ಆಧಾರದಲ್ಲಿ ನಿನ್ನೆಯ ಜಿ.ಎಸ್.ಟಿ. ಕೌನ್ಸಿಲ್ ಸಭೆಯಲ್ಲಿ ಕೇಂದ್ರ ವಿತ್ತ ಸಚಿವರ ನೇತೃತ್ವದಲ್ಲಿ ನಿರ್ಧಾರ ಮಾಡಿದ್ದಾರೆ. ದೇಶದ ಎಲ್ಲ ರಾಜ್ಯಗಳ ಸಹಭಾಗಿತ್ವದ ಜೊತೆಗೆ ಸರ್ವಾನುಮತದಿಂದ ಜಿಎಸ್ಟಿ ಹೊಸ ಸ್ಲ್ಯಾಬಿಗೆ ಬಹಳ ದೊಡ್ಡದಾದ ಸುಧಾರಣೆ ನಿನ್ನೆ ಆಗಿದೆ ಎಂದು ವಿವರಿಸಿದರು.
ವ್ಯಾಪಾರ ವಹಿವಾಟು ಮಾಡುವವರಿಗೆ ಸಹಾಯ ಆಗಬೇಕು; ಸುಲಭ ಆಗಬೇಕು ಎಂಬ ಉದ್ದೇಶದಿಂದ ದೊಡ್ಡ ಪರಿವರ್ತನೆ ತಂದಿದ್ದಾರೆ. ಪುನರಾವರ್ತನೆಗಳನ್ನು ತಪ್ಪಿಸಲಾಗಿದೆ. ಚಿಕ್ಕ ಮತ್ತು ಮಧ್ಯಮ ಗಾತ್ರದ ಉದ್ಯಮ ಮಾಡುತ್ತಿರುವ ಎಂಎಸ್ಎಂಇಗಳ ವ್ಯಾಪ್ತಿಗೆ ಬರುವ ಕಂಪನಿಗಳಿಗೆ, ಕಾರ್ಖಾನೆಗಳಿಗೆ ದೊಡ್ಡ ಮಟ್ಟದ ಸಹಾಯ ಆಗಲಿದೆ. ದೇಶದ ಉತ್ಪಾದನಾ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.