ಬೆಂಗಳೂರು,,ಸೆ. 04 (DaijiworldNews/AK): ಬಿಜೆಪಿ ಶ್ರೀ ಕ್ಷೇತ್ರ ಧರ್ಮಸ್ಥಳದ ಕೋಟ್ಯಂತರ ಭಕ್ತರ ಪರವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಸರಕಾರಕ್ಕೆ ಸಮೀರ್ನಂಥ ದೇಶದ್ರೋಹಿಯನ್ನು ಒದ್ದು ಒಳಗೆ ಹಾಕಲು ಆಗುತ್ತಿಲ್ಲ ಎಂದು ಆಕ್ಷೇಪಿಸಿದರು. ಸರಕಾರವು ಸಮೀರ್ ಜಾಮೀನು ರದ್ದು ಮಾಡುವಂತೆ ಯಾಕೆ ಅರ್ಜಿ ಸಲ್ಲಿಸಿಲ್ಲ ಎಂದು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯನವರ ಪ್ರಶ್ನೆಗೆ ಅವರು ಈ ರೀತಿ ಉತ್ತರ ನೀಡಿದರು. ಇದೆಲ್ಲ ಹಿನ್ನೆಲೆಯಲ್ಲಿ ನಾವು ಧರ್ಮಸ್ಥಳ ಚಲೋ ಹಮ್ಮಿಕೊಂಡಿದ್ದೆವು ಎಂದು ತಿಳಿಸಿದರು .ಸೌಜನ್ಯ ವಿಚಾರ ಬಂದಾಗ ರಾಜ್ಯಾಧ್ಯಕ್ಷನಾಗಿ ನನಗೂ ಅನಿಸಿತ್ತು. ಸೌಜನ್ಯ ತಾಯಿ, ಕುಟುಂಬದ ಸದಸ್ಯರನ್ನು ಭೇಟಿ ಮಾಡಬೇಕೆಂದು ನಾನು ತೀರ್ಮಾನ ಮಾಡಿದೆ. ಸೌಜನ್ಯ ಬರ್ಬರ ಹತ್ಯೆಯಾಗಿ 12 ವರ್ಷ ಕಳೆದರೂ, ತಡವಾಗಿದ್ದರೂ, ಮಾನವೀಯತೆ ದೃಷ್ಟಿಯಿಂದ ಅಧ್ಯಕ್ಷನಾಗಿ ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ. ಮುಂದೆ ಸುಪ್ರೀಂ ಕೋರ್ಟಿಗೆ ಹೋದರೆ ಅದರ ವೆಚ್ಚ ಭರಿಸುವ ಭರವಸೆ ಕೊಟ್ಟಿದ್ದೇನೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.
ರಾಜ್ಯದ ಮುಖ್ಯಮಂತ್ರಿಗಳು ಆ ಕೋಟ್ಯಂತರ ಭಕ್ತರ ತಾಳ್ಮೆ, ಸಹನೆಯನ್ನು ಪರೀಕ್ಷೆ ಮಾಡಲು ಹೋಗಬಾರದು ಎಂದು ಭಕ್ತರ ಪರವಾಗಿ ಕೋರಿದರು. ನೀವು ಪ್ರಾಮಾಣಿಕರೇ ಆಗಿದ್ದರೆ ಯಾಕೆ ಆ ಸಮೀರ್ ಗೆ ಜಾಮೀನು ಆಗಿದೆ ಎಂದು ಕೈ ಕಟ್ಟಿ ಕುಳಿತಿದ್ದೀರಿ? ನೀವು ನಿಜವಾಗಿಯೂ ಪ್ರಾಮಾಣಿಕರೇ ಆಗಿದ್ದರೆ ಸಮೀರ್ನ ಜಾಮೀನು ರದ್ದು ಅರ್ಜಿ ಯಾಕೆ ಸಲ್ಲಿಸಿಲ್ಲ? ಎಂದು ಕೇಳಿದರು. ತನಿಖೆ ಪಾರದರ್ಶಕವಾಗಿ ಆಗಬೇಕೆಂದು ಬಿಜೆಪಿ ಸುಮ್ಮನೆ ಇದ್ದಿದ್ದೇ ತಪ್ಪಾಯಿತೇ ಎಂದು ಪ್ರಶ್ನಿಸಿದರು. ಸಮೀರ್ ಬೇಲ್ ರದ್ದತಿಗೆ ಸರಕಾರ ಯಾಕೆ ಮೀನಾಮೇಷ ಮಾಡುತ್ತಿದೆ ಎಂದು ಕೇಳಿದರು.
ಬಿಜೆಪಿಯಿಂದ ಧರ್ಮಸ್ಥಳ ಚಲೋ ನಮ್ಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎಂದು ಅವರು ತಿಳಿಸಿದರು. ಅಪಪ್ರಚಾರದ ಕಾರಣದಿಂದ ಶ್ರೀ ಮಂಜುನಾಥ ಸ್ವಾಮಿಯ ಕೋಟ್ಯಂತರ ಭಕ್ತರಿಗೆ ನೋವಾಗುತ್ತಿದೆ. ಮತ್ತೊಂದು ಕಡೆ ರಾಜ್ಯ ಸರಕಾರದ ಎಸ್ಐಟಿ ತನಿಖೆ ದಿನೇದಿನೇ ತಡವಾಗುತ್ತಿದೆ. ಇದರ ಪರಿಣಾಮವಾಗಿ ಅಸಂಖ್ಯಾತ ಭಕ್ತರು ನೊಂದಿದ್ದರು. ಇವೆಲ್ಲ ವಿಚಾರಗಳನ್ನು ಇಟ್ಟುಕೊಂಡು ನಾವು ಧರ್ಮಸ್ಥಳ ಚಲೋ ಕರೆ ನೀಡಿದ್ದೆವು. ರಾಜ್ಯದ ಪ್ರತಿಯೊಂದು ಜಿಲ್ಲೆಗಳಿಂದ, ಪ್ರತಿ ವಿಧಾನಸಭಾ ಕ್ಷೇತ್ರದಿಂದ ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಬಂದಿದ್ದರು. ಹಿಂದೂ ಕಾರ್ಯಕರ್ತರು ಬಂದಿದ್ದಾರೆ. ಯಶಸ್ವಿಯಾಗಿ ಕಾರ್ಯಕ್ರಮ ನಡೆದಿದೆ ಎಂದು ವಿವರಿಸಿದರು.