ಬೆಂಗಳೂರು, ಸೆ. 05 (DaijiworldNews/AK): ಮೊಬೈಲ್ ಗೀಳು ಈಗ ಮಕ್ಕಳಲ್ಲಿ ಹೆಚ್ಚಾಗಿದೆ. ಈ ಗೀಳಿನಿಂದ ಮಕ್ಕಳನ್ನು ಹೊರಗೆ ತರುವ ಕೆಲಸವನ್ನು ಶಿಕ್ಷಕರು ಪರಿಣಾಮಕಾರಿಯಾಗಿ ಆಗಬೇಕಿದೆ. ಆದ್ದರಿಂದ, "ಮೊಬೈಲ್ ಬಿಡಿ-ಪುಸ್ತಕ ಹಿಡಿ" ಎನ್ನುವ ಮೌಲ್ಯವನ್ನು ಪ್ರತೀ ಶಾಲೆ ಮತ್ತು ಮನೆಗಳಲ್ಲೂ ಜಾರಿ ಆಗಲಿ ಎಂದು ಶಿಕ್ಷಕರಿಗೆ-ಮಕ್ಕಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಅಭಿನಂದಿಸಿ ಮಾತನಾಡಿದರು .ಶಿಕ್ಷಣ ನಮ್ಮ ಸರ್ಕಾರದ ಆದ್ಯತಾ ಕಾರ್ಯಕ್ರಮವಾಗಿದ್ದು ವರ್ಷಕ್ಕೆ 65 ಸಾವಿರ ಕೋಟಿ ರೂಪಾಯಿಯನ್ನು ಶಿಕ್ಷಣಕ್ಕೆ ಖರ್ಚು ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೆಕ್ಕ ಬಿಚ್ಚಿಟ್ಟರು. ನಾನು ರಾಜಪ್ಪ ಮೇಸ್ಟ್ರಿಂದ ಶಾಲಾ ಶಿಕ್ಷಣವನ್ನು ಹಾಗೂ ಪ್ರೊ.ನಂಜುಂಡಸ್ವಾಮಿ ಅವರಿಂದ ರಾಜಕೀಯ ಪಾಠ ಕಲಿತೆ ಎನ್ನುವ ಮೂಲಕ ತಮ್ಮ ಶಿಕ್ಷಕರನ್ನು ಸ್ಮರಿಸಿದ ಸಿ.ಎಂ.ಸಿದ್ದರಾಮಯ್ಯ ಅವರು ಇಬ್ಬರಿಗೂ ಧನ್ಯತೆ ಹೇಳಿದರು.
ನಮ್ಮ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಥಿತಿಯನ್ನು ರೂಪಿಸುವುದು ವೈಚಾರಿಕ ಶಿಕ್ಷಣ. ಕೇವಲ ಪಾತ್ರೆ ತುಂಬಿಸುವುದು ಶಿಕ್ಷಣ ಅಲ್ಲ. ಮಕ್ಕಳಲ್ಲಿ ಅರಿವಿನ ಕಿಡಿ ಹೊತ್ತಿಸುವುದೇ ಶಿಕ್ಷಣದ ಉದ್ದೇಶ ಮತ್ತು ಮಹತ್ವವಾಗಿದೆ. ಇಂಥಾ ಶಿಕ್ಷಣ ನಮ್ಮ ಸರ್ಕಾರದ ಗುರಿ ಎಂದರು.
ಮೊದಲೆಲ್ಲಾ ಶೂದ್ರರಿಗೆ ವಿದ್ಯೆ ಕಲಿಯುವ ಅವಕಾಶ ಇರಲಿಲ್ಲ. ಸಂವಿಧಾನ ನಮಗೆ ಎಲ್ಲರಿಗೂ ಕಡ್ಡಾಯ ಶಿಕ್ಷಣದ ಹಕ್ಕು ನೀಡಿದೆ. ಆದ್ದರಿಂದ, ನಮ್ಮ ಸರ್ಕಾರ ಬಂದ ಮೇಲೆ ಸಂವಿಧಾನದ ಪೀಠಿಕೆಯನ್ನು ಅರ್ಥೈಸುವ ಕೆಲಸ ಮಾಡುತ್ತಿದೆ. ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವ ಸಂವಿಧಾನದ ಮೌಲ್ಯಗಳಾಗಿದ್ದು ಇವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಮನುಷ್ಯತ್ವ ಹೊಂದಿರುವ ಅತ್ಯುನ್ನತ ನಾಗರಿಕರನ್ನು ಸೃಷ್ಟಿಸಬಹುದು. ಇದನ್ನು ಶಿಕ್ಷಕರು ಅರ್ಥ ಮಾಡಿಕೊಂಡು ನಾಗರಿಕ ಸಮಾಜ ರೂಪಿಸಬೇಕು ಎಂದರು.
ಜಾತಿ ವ್ಯವಸ್ಥೆ ಇರುವ ನಮ್ಮ ಸಮಾಜದಲ್ಲಿ ಬದಲಾವಣೆ ಆಗಿ ಮಾನವೀಯ ವ್ಯವಸ್ಥೆ ರೂಪುಗೊಳ್ಳಬೇಕು. ಶಿಕ್ಷಣ ಕಲಿತೂ ಜಾತಿ ಆಚರಿಸುವುದು, ಕಂದಾಚಾರ-ಮೌಡ್ಯ ಆಚರಿಸುವುದು ಶಿಕ್ಷಣಕ್ಕೆ ಬಗೆಯುವ ದ್ರೋಹ. ಆದ್ದರಿಂದ ವೈಚಾರಿಕತೆ, ವೈಜ್ಞಾನಿಕತೆ, ಪರಧರ್ಮ ಸಹಿಷ್ಣುತೆ ಮೈಗೂಡಿಸಿಕೊಳ್ಳುವ ಶಿಕ್ಷಣ ಕೊಡುವ ನೈತಿಕ ಮತ್ತು ವೃತ್ತಿಪರ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದರು.
ವೈದ್ಯರಾದವರು, ಪ್ರೊಫೆಸರ್ ಗಳು, ಉಪನ್ಯಾಸಕರೂ ಹಣೆ ಬರಹ ನಂಬಿಕೊಂಡಿದ್ದಾರೆ. ಇವರು ಮತ್ತು ಎಂಜಿನಿಯರಿಂಗ್ ಓದಿದವರೂ ಜಾತಿ ಮಾಡುವುದನ್ನು, ಮೌಡ್ಯ ಆಚರಿಸುವುದನ್ನು ನಾನು ನೋಡಿದ್ದೇನೆ. ಹಾಗಾದರೆ ಇವರಿಗೆ ಸಿಕ್ಕ ಶಿಕ್ಷಣ ಎಂಥಾದ್ದು ಎಂದು ಪ್ರಶ್ನಿಸಿದರು.
ಜಾತಿ ವ್ಯವಸ್ಥೆ ಕಾರಣಕ್ಕೆ ಅಸಮಾನ ಸಮಾಜ ನಿರ್ಮಾಣ ಆಗಿ ಅವಕಾಶಗಳು ಎಲ್ಲರಿಗೂ ಸಿಗುತ್ತಿಲ್ಲ. ಶೂದ್ರರ ಜೊತೆಗೆ ಮಹಿಳೆಯರನ್ನೂ ಶಿಕ್ಷಣದಿಂದ ಹೊರಗಿಡಲಾಗಿತ್ತು. ಆದರೆ ಈಗ ಶಿಕ್ಷಣದ ಹಕ್ಕಿನ ಕಾರಣಕ್ಕೆ ಅವಕಾಶ ಪಡೆದು ಹೆಚ್ಚೆಚ್ಚು ರ್ಯಾಂಕ್ ಪಡೆಯುತ್ತಿರುವವರಲ್ಲಿ ಹೆಣ್ಣು ಮಕ್ಕಳೇ ಹೆಚ್ಚಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿದ್ಯಾರ್ಥಿ ದೆಸೆಯಲ್ಲಿ ನನಗೆ ಮನೆಯಲ್ಲಿ ಪ್ರತೀದಿನ ಅನ್ನ ತಿನ್ನುವ ಅವಕಾಶ, ಶಕ್ತಿ ಇರಲಿಲ್ಲ. ಯಾರಿಗೂ ಈ ಸ್ಥಿತಿ ಬರಬಾರದು ಎನ್ನುವ ಕಾರಣದಿಂದ ನಾನು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದೆ ಎಂದು ವಿವರಿಸಿದರು.
ಡಾ.ಸರ್ವೆಪಲ್ಲಿ ರಾಧಾಕೃಷ್ಣ ಅವರು ಅತ್ಯಂತ ನೈತಿಕ ಮೌಲ್ಯಗಳುಳ್ಳ ಶಿಕ್ಷಕರೂ, ರಾಷ್ಟ್ರಪತಿಗಳೂ ಆಗಿದ್ದರು. ಇವರ ಆದರ್ಶಗಳನ್ನು ಪಾಲಿಸುವುದೇ ಅವರಿಗೆ ಸಲ್ಲಿಸುವ ಅತ್ಯುನ್ನತ ಗೌರವ ಎಂದರು.