ಬೆಂಗಳೂರು, ಜೂ 28 (Daijiworld News/MSP): ಬಸವಕಲ್ಯಾಣ ತಾಲೂಕಿನ ಉಜಳಂಬದಲ್ಲಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಗ್ರಾಮವಾಸ್ತವ್ಯ ಮುಕ್ತಾಯಗೊಂಡಿದೆ. ಹೀಗಾಗಿ ಗ್ರಾಮದಿಂದ ನೇರವಾಗಿ ವಿದೇಶಕ್ಕೆ ಹಾರಲು ಮುಖ್ಯಮಂತ್ರಿಗಳು ರೆಡಿಯಾಗಿದ್ದಾರೆ. ಇಂದಿನಿಂದ ಒಂದು ವಾರಗಳ ಕಾಲ ಅಮೇರಿಕಾ ಪ್ರವಾಸವನ್ನು ಸಿಎಂ ಕೈಗೊಳ್ಳಲಿದ್ದಾರೆ.
ಜುಲೈ 4,5,6 ರಂದು ಅಮೇರಿಕಾದಲ್ಲಿ ಒಕ್ಕಲಿಗ ಪರಿಷತ್ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಅಮೆರಿಕ ಪ್ರವಾಸಕ್ಕೆ ತೆರಳಲಿದ್ದಾರೆ. ಜೂ. 28 ರ ಶುಕ್ರವಾರ ಸಂಜೆ ಅಮೇರಿಕಾಕ್ಕೆ ತೆರಳಲಿದ್ದು ಜುಲೈ 8ರಂದು ಬೆಂಗಳೂರಿಗೆ ವಾಪಸಾಗಲಿದ್ದಾರೆ ಎಂದು ತಿಳಿದುಬಂದಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ಕುಮಾರಸ್ವಾಮಿ, ದೇವೇಗೌಡರು. ಸಚಿವ ಡಿ ಕೆ ಶಿವಕುಮಾರ್ ಸೇರಿದಂತೆ ಒಕ್ಕಲಿಗ ಸಚಿವರು, ಶಾಸಕರಿಗೆ ಆಹ್ವಾನ ನೀಡಲಾಗಿದೆ. ಅಮೇರಿಕಾಗೆ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದ ಶ್ರೀಗಳು, ಸ್ಪಟಿಕಪುರಿ ಮಹಾಸಂಸ್ಥಾನದ ನಂಜಾವಧೂತ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರು ಕಾರ್ಯಕ್ರಮಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ಅಮೇರಿಕಾದ ನ್ಯೂಜೆರ್ಸಿಯಲ್ಲಿ ಆದಿಚುಂಚನಗಿರಿ ಸ್ವಾಮೀಜಿ ದೇವಸ್ಥಾನ ನಿರ್ಮಾಣಕ್ಕೆ ಮುಂದಡಿ ಇತ್ಟಿದ್ದಾರೆ. ಇದರ ಶಂಕುಸ್ಥಾಪನೆಗಾಗಿ ಆಗಮಿಸುವಂತೆ ಶ್ರೀಗಳು ಒತ್ತಾಯ ಮಾಡಿದ್ದಾರೆ. ನಾನು ಈ ಪ್ರವಾಸಕ್ಕಾಗಿ ಸರ್ಕಾರದ ಹಣವನ್ನು ವೆಚ್ಚ ಮಾಡುತ್ತಿಲ್ಲ. ನನ್ನ ಸ್ವಂತ ಖರ್ಚಿನಲ್ಲಿ ಈ ಪ್ರವಾಸ ಕೈಗೊಳ್ಳುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.