ಮೀರತ್, ಜೂ 28 (Daijiworld News/MSP): ಉತ್ತರ ಪ್ರದೇಶದ ಮೀರತ್ನಲ್ಲಿ ಮುಸ್ಲಿಂ ಪ್ರಾಬಲ್ಯವಿರುವ ಗ್ರಾಮದಲ್ಲಿದ್ದ 125 ಕ್ಕೂ ಹೆಚ್ಚು ಹಿಂದೂ ಕುಟುಂಬಗಳು ದುಷ್ಕರ್ಮಿಗಳ ಕಿರುಕುಳಕ್ಕೆ ತಾವು ಹುಟ್ಟಿ ಬೆಳೆದ ಊರು ತೊರೆದಿರುವ ಅಘಾತಕಾರಿ ವಿಚಾರ ಹೊರಬಿದ್ದಿದೆ.
ಸಾಂದರ್ಭಿಕ ಚಿತ್ರ
ಸಾಮಾಜಿಕ ಕಾರ್ಯಕರ್ತ ಭವೇಶ್ ಮೆಹ್ತಾ ನೀಡಿದ ದೂರಿನಿಂದ ಈ ವಿಚಾರ ಬೆಳಕಿಗೆ ಬಂದಿದೆ. "ಹಿಂದೂ ಕುಟುಂಬದ ಸದಸ್ಯರಿಗೆ ಹಾಗೂ ಮಹಿಳೆಯರಿಗೆ ಅಲ್ಲಿದ್ದ ಭಿನ್ನ ಸಮುದಾಯದ ಸದಸ್ಯರು ಕಿರುಕುಳ ನೀಡುತ್ತಿದ್ದು ಜನರು ಇದನ್ನು ಆಕ್ಷೇಪಿಸಿದರೆ ದುಷ್ಕರ್ಮಿಗಳು ಥಳಿಸುತ್ತಾರೆ" ಎಂದು ದೂರುದಾರರು ಆರೋಪಿಸಿದ್ದಾರೆ.ಕಿರುಕುಳ ತಾಳಲಾರದೆ 125 ಸಮುದಾಯದ ಹಿಂದೂ ಕುಟುಂಬಗಳು ಮೀರತ್ನ ಪ್ರಹ್ಲಾದ್ ನಗರದಿಂದ ವಲಸೆ ಬಂದಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಅಳಲು ತೋಡಿಕೊಂಡಿರುವ ಹಿಂದೂ ಕುಟುಂಬಗಳು, " ನಾವು ಹಲವು ವರ್ಷಗಳಿಂದ ಇಲ್ಲಿಯೇ ವಾಸವಾಗಿದ್ದೇವೆ. ಆದರೆ, ಈಗ ನಮ್ಮ ಮನೆ ತೊರೆದು ಹೋಗುವಂತೆ ದುಷ್ಕರ್ಮಿಗಳು ಬೆದರಿಕೆ ಹಾಕುತ್ತಿದ್ದಾರೆ" ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಎಡಿಜಿ ಪ್ರಶಾಂತ್ ಕುಮಾರ್, ಜಿಲ್ಲಾಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದೇನೆ. ಹಿಂದೂಗಳ ವಲಸೆಗೆ, ಸ್ಥಳೀಯ ಸಮಸ್ಯೆಗಳು ಕಾರಣವಿರಬಹುದು ಎಂದಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ಪ್ರದೇಶದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದಿದ್ದಾರೆ.
ಇದೊಂದು ಗಂಭೀರ ಪ್ರಕರಣವಾಗಿದ್ದು, ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗ್ರಹಿಸಿದ್ದಾರೆ.