ಬೆಂಗಳೂರು, ಜೂ28(Daijiworld News/SS): ಬಿಜೆಪಿ ಪಕ್ಷವು ಬ್ರಿಟಿಷರ ನೀತಿಯನ್ನು ಅನುಸರಿಸುತ್ತಿದೆ. ಬ್ರಿಟಿಷರು ಹಾಗೂ ಬಿಜೆಪಿಗೆ ಸಾಮ್ಯತೆಯಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಜಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಸಿದ್ದರಾಮಯ್ಯ, ಈ ಹಿಂದೆ ಬ್ರಿಟಿಷರು ನಮ್ಮನ್ನು ಆಳಲು ಒಡೆದಾಳುವ ನೀತಿಯನ್ನು ಅನುಸರಿಸಿದ್ದರು. ಬ್ರಿಟಿಷರಂತೆ ಬಿಜೆಪಿ ಕೂಡ ಇದೇ ನೀತಿಯನ್ನು ಅನುಸರಿಸುತ್ತಿದೆ. ಬ್ರಿಟಿಷರು ಹಾಗೂ ಬಿಜೆಪಿಗೆ ತುಂಬಾ ಸಾಮ್ಯತೆಯಿದೆ ಎಂದು ದೂರಿದ್ದಾರೆ.
ಈ ಭಾರಿಯ ಚುನಾವಣೆ ಫಲಿತಾಂಶ ಭಾರತೀಯರ ಸೋಲಾಗಿದೆ. ಆದರೆ, ಕೆಲವರು ಈ ಸೋಲನ್ನೂ ಬರಮಾಡಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮ ಸರಕಾರದ ಅವಧಿಯಲ್ಲಿ ರಾಜ್ಯದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಿದ್ದೇವೆ. ಆದರೆ ಈ ಬಾರಿಯ ಚುನಾವಣೆ ಫಲಿತಾಂಶವನ್ನು ನಂಬಲು ಆಗುತ್ತಿಲ್ಲ. ಈ ಬಗ್ಗೆ ಚರ್ಚೆ ನಡೆದರೆ ತಪ್ಪೇನಿಲ್ಲ ಎಂದು ಹೇಳಿದ್ದಾರೆ.
ನಾವು ಇಷ್ಟೆಲ್ಲಾ ಅಭಿವೃದ್ಧಿಗಳನ್ನು ಮಾಡಿದ್ದೇವೆ. ಅನೇಕ ಯೋಜನೆ, ಅನುದಾನಗಳನ್ನು ನೀಡಿದ್ದೇವೆ. ಆದರೆ, ಅಭಿವೃದ್ಧಿ ಮಾಡಿದವರಿಗೆ ನೀವು ವೋಟ್ ಹಾಕೊಲ್ಲ. ಏನೂ ಮಾಡದ ಬಿಜೆಪಿಯವರಿಗೆ ವೋಟ್ ಹಾಕ್ತೀರಿ. ನೀವೇಕೆ ಹೀಗೆ ಮಾಡ್ತೀರಿ ಎನ್ನುವುದು ಗೊತ್ತಾಗುತ್ತಿಲ್ಲ ಎಂಬ ಹೇಳಿಕೆಯನ್ನು ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.