ಹೊಸದಿಲ್ಲಿ, ಜೂ28(Daijiworld News/SS): ನಿರಾತಂಕವಾಗಿ ಆಹಾರ ಧಾನ್ಯ ಪಡೆಯಲು ಸಾಧ್ಯವಾಗುವಂತೆ 'ಒನ್ ನೇಷನ್, ಒನ್ ರೇಷನ್ ಕಾರ್ಡ್' ರೂಪಿಸಲಾಗುತ್ತಿದೆ ಎಂದು ಕೇಂದ್ರ ಸರಕಾರ ಹೇಳಿದೆ.
ಕಡಿಮೆ ದರದಲ್ಲಿ ಬಡವರಿಗೆ ಆಹಾರಧಾನ್ಯವನ್ನು ತಡೆಯಿಲ್ಲದೆ ಪೂರೈಸುವ ನಿಟ್ಟಿನಲ್ಲಿ 'ಒನ್ ನೇಷನ್, ಒನ್ ರೇಶನ್ ಕಾರ್ಡ್' ಜಾರಿಗೊಳಿಸುವುದಾಗಿ ಕೇಂದ್ರ ತಿಳಿಸಿದೆ. ಈ ಯೋಜನೆಯಿಂದ ಒಬ್ಬ ವ್ಯಕ್ತಿ ಅಥವಾ ಕುಟುಂಬ ವಿವಿಧ ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ರೇಶನ್ ಕಾರ್ಡ್ಗಳನ್ನು ಹೊಂದುವ ಅಗತ್ಯವನ್ನು ನಿವಾರಿಸಲಾಗುತ್ತದೆ. ಜತೆಗೆ ದೇಶದ ಬೊಕ್ಕಸಕ್ಕೂ ಉಳಿತಾಯವಾಗುತ್ತದೆ ಎಂದು ಸರಕಾರ ಹೇಳಿದೆ.
ಕೇಂದ್ರ ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅಧ್ಯಕ್ಷತೆಯಲ್ಲಿ ರಾಜ್ಯ ಆಹಾರ ಕಾರ್ಯದರ್ಶಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ತ್ವರಿತ ಜಾರಿಗೆ ಸೂಚಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಅವರು, ಇದರಿಂದ ವಲಸೆ ಕಾರ್ಮಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅವರಿಗೆ ಪೂರ್ಣ ಆಹಾರ ಭದ್ರತೆ ದೊರೆಯಲಿದೆ. ಇಂತಹ ಕಾರ್ಮಿಕರು ಯಾವುದೇ ನಿರ್ದಿಷ್ಟ ಪಡಿತರ ಅಂಗಡಿಯಿಂದ ಆಹಾರ ಧಾನ್ಯಗಳನ್ನು ಖರೀದಿಸಬೇಕಾಗಿಲ್ಲ. ಬದಲಾಗಿ ತಮಗೆ ಸಮೀಪದ ಯಾವುದೇ ಪಡಿತರ ಅಂಗಡಿಯಿಂದಲೂ ಖರೀದಿಸಬಹುದಾಗಿದೆ. ಜತೆಗೆ ಭ್ರಷ್ಟಾಚಾರಕ್ಕೂ ಕಡಿವಾಣ ಬೀಳಲಿದೆ' ಎಂದು ತಿಳಿಸಿದ್ದಾರೆ.
ಒನ್ ನೇಷನ್, ಒನ್ ರೇಷನ್ ಕಾರ್ಡ್ ಜಾರಿಗೆ ತರಲು ಕೇಂದ್ರ ಆಹಾರ ಸಚಿವಾಲಯ ದೇಶದ ಎಲ್ಲ ರೇಷನ್ ಕಾರ್ಡ್ಗಳನ್ನು ಒಂದೇ ವ್ಯವಸ್ಥೆಯಡಿಗೆ ತರಲಿದೆ. ಇದರಿಂದ ನಕಲಿ ರೇಶನ್ ಕಾರ್ಡ್ಗಳನ್ನು ನಿವಾರಿಸಬಹುದಾಗಿದೆ.
ಲೋಕಸಭಾ ಚುನಾವಣೆಯ ನಂತರ ಒಂದು ದೇಶ ಒಂದು ಚುನಾವಣೆ ಬಗ್ಗೆ ಮಾತನಾಡುತ್ತಿದ್ದ ಕೇಂದ್ರ ಸರ್ಕಾರ ಇದೀಗ ಆಹಾರ ಸಂರಕ್ಷಣೆಗಾಗಿ ಒಂದು ದೇಶ ಒಂದೇ ಪಡಿತರ ಚೀಟಿ ಯೋಜನೆ ಬಗ್ಗೆ ಆಸಕ್ತಿ ವಹಿಸಿದೆ.