ನವದೆಹಲಿ, ಜೂ 28 (Daijiworld News/SM): 50 ಪೈಸೆ ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ಯಾವುದೇ ನಾಣ್ಯಗಳನ್ನು ರದ್ದುಗೊಳಿಸಿಲ್ಲ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ. ಹತ್ತು ರೂಪಾಯಿ ನಾಣ್ಯ ಸೇರಿದಂತೆ 50 ಪೈಸೆ ತನಕದ ಯಾವುದೇ ನಾಣ್ಯವನ್ನು ವ್ಯವಾಹರದಲ್ಲಿ ನಿರಾಕರಿಸುವಂತಿಲ್ಲವೆಂದು ಆರ್ಬಿಐ ಹೇಳಿದೆ.
ಹತ್ತು ರೂಪಾಯಿ ನಾಣ್ಯಗಳ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಕೆಲವರು ಈ ನಾಣ್ಯ ನಿಷೇಧಗೊಂಡಿದೆ ಎಂದು ವದಂತಿ ಎಬ್ಬಿಸುತ್ತಾರೆ. ಇದೇ ಕಾರಣದಿಂಡ ಈ ನಾಣ್ಯ ತೆಗೆದುಕೊಳ್ಳಲು ಹಲವೆಡೆ ಹಿಂದೇಟು ಹಾಕುತ್ತಾರೆ. ಹಲವರು ಹತ್ತು ರೂಪಾಯಿ ನಾಣ್ಯಗಳನ್ನು ತೆಗೆದುಕೊಳ್ಳುವುದೇ ಇಲ್ಲ. ಆದರೆ ಆರ್ಬಿಐ ಇದನ್ನು ಸ್ಪಷ್ಟವಾಗಿ ತಪ್ಪು ಎಂದು ಹೇಳಿದೆ.
50 ಪೈಸೆಗಿಂತಲೂ ಹೆಚ್ಚಿನ ಮೌಲ್ಯದ ಯಾವ ನಾಣ್ಯವನ್ನೂ ತೆಗೆದುಕೊಳ್ಳದೆ ನಿರಾಕರಿಸುವಂತಿಲ್ಲ ಎಂದು ಆರ್ಬಿಐ ಪುನರುಚ್ಛರಿಸಿದೆ. ನಾಣ್ಯಗಳ ಕುರಿತಾಗಿ ಕೆಲವು ಗಾಳಿ ಸುದ್ದಿಗಳೂ ಸಹ ಹರಡಿ ನಾಣ್ಯಗಳನ್ನು ಸ್ವೀಕರಿಸಲು ವ್ಯಾಪಾರಿಗಳು ನಿರಾಕರಿಸುತ್ತಿದ್ದಾರೆಂದು ತಿಳಿದು ಬಂದಿರುವ ಕಾರಣ, ಹೀಗೆ ಗಾಳಿ ಸುದ್ದಿ ಹರಡಿಸಬಾರದೆಂದು ಆರ್ಬಿಐ ಮನವಿ ಮಾಡಿದೆ.
ಇಷ್ಟೆಲ್ಲ ಸ್ಪಷ್ಟಗೊಂಡ ಬಳಿಕ ವ್ಯಾಪಾರಿಗಳು ಅಥವಾ ಯಾವುದೇ ವ್ಯವಹಾರದ ಸಂಬಂಧ ಆರ್ಬಿಐನ ನಾಣ್ಯಗಳನ್ನು ಸ್ವೀಕರಿಸಲು ನಿರಾಕರಿಸಿದರೆ, ಆರ್ಬಿಐನ ಸೂಚನೆಯ ಉಲ್ಲಂಘನೆ ಎಂದು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಆರ್ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.