ದಾವಣಗೆರೆ, ಜೂ29(Daijiworld News/SS): ಮಧ್ಯಂತರ ಚುನಾವಣೆಯ ಕುರಿತು ಬಿಜೆಪಿಗೆ ಯಾವುದೇ ರೀತಿಯ ಆಸಕ್ತಿ ಇಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಗೆ ಮಧ್ಯಂತರ ಚುನಾವಣೆ ವಿಷಯದಲ್ಲಿ ಭಾರತೀಯ ಜನತಾ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಒಂದು ವೇಳೆ ಮಧ್ಯಂತರ ಚುನಾವಣೆಯು ಅನಿವಾರ್ಯವಾದರೆ ಪಕ್ಷ ಅದಕ್ಕೆ ಹಿಂಜರಿಯುವುದಿಲ್ಲ. ಶಾಸಕರಿಗೆ ಐದು ವರ್ಷಗಳ ಕಾಲ ಆಡಳಿತ ನಡೆಸಲು ಜನ ಆದೇಶ ಕೊಡುತ್ತಾರೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ - ಜೆಡಿಎಸ್ ಸೇರಿಕೊಂಡು ಸಮ್ಮಿಶ್ರ ಸರಕಾರ ರಚನೆ ಮಾಡಿದ್ದು, ಈ ಸರ್ಕಾರ ರಚನೆಯಾದ ಒಂದು ವರ್ಷದಲ್ಲಿಯೆ ಮಧ್ಯಂತರ ಚುನಾವಣೆಯ ಮಾತುಗಳು ಕೇಳಿ ಬರುತ್ತಿವೆ ಎಂದು ಟೀಕಿಸಿದರು.
ಇದೇ ವೇಳೆ ಜಿಂದಾಲ್ ಕಂಪನಿಗೆ ಭೂಮಿ ನೀಡುವ ವಿಚಾರವಾಗಿ ಮಾತನಾಡಿದ ಕೋಟಾ ಶ್ರೀನಿವಾಸ್ ಪೂಜಾರಿ, ಜಿಂದಾಲ್ ಕಂಪನಿಗೆ 3600 ಎಕರೆ ಭೂಮಿ ನೀಡಿರುವುದನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟದಿಂದ ಬಿಜೆಪಿ ಯಾವ ಕಾರಣಕ್ಕೂ ಹಿಂದೆ ಸರಿಯಲ್ಲ. ಹೋರಾಟದಿಂದ ನಾವು ಹಿಂದಕ್ಕೆ ಹೆಜ್ಜೆ ಇಡುವ ಪ್ರಶ್ನೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.