ಬೆಂಗಳೂರು, ಜೂ29(Daijiworld News/SS): ಹೆಚ್ಚಿನ ಬಡ್ಡಿ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿದ ಆರೋಪ ಎದುರಿಸುತ್ತಿರುವ ಐಎಂಎ ಜ್ಯುವೆಲರ್ಸ್ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ವಿರುದ್ಧದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ, ವಿಭಾಗೀಯ ಪೀಠಕ್ಕೆ ವರ್ಗಾಯಿಸಿ ಆದೇಶ ಹೊರಡಿಸಿದೆ.
ಈಗಾಗಲೇ ಬಹುಕೋಟಿ ಐ ಮಾನಿಟರಿ ಅಡ್ವೈಸರಿ(ಐಎಂಎ) ವಂಚನೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಜಾರಿ ನಿರ್ದೇಶನಾಲಯ(ಇಡಿ) ಐಎಂಎ ಸಮೂಹಕ್ಕೆ ಸೇರಿದ 209 ಕೋಟಿ ರುಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಿದೆ.
ಸಾವಿರಾರು ಕೋಟಿ ರುಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಐಎಂಎ ವ್ಯವಸ್ಥಾಪಕ ನಿರ್ದೇಶಕ ಮೊಮಹ್ಮದ್ ಮನ್ಸೂರ್ ಖಾನ್ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಕೇಸ್ ದಾಖಲಿಸಿಕೊಂಡಿರುವ ಇಡಿ, ತನಿಖೆ ಭಾಗವಾಗಿ 209 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿಕೊಂಡಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಐಎಂಎಗೆ ಸೇರಿದ 197 ಕೋಟಿ ಮೌಲ್ಯದ ಸ್ಥಿರಾಸ್ಥಿ ಹಾಗೂ 12 ಕೋಟಿ ರುಪಾಯಿ ಬ್ಯಾಂಕ್ ಠೇವಣಿಯನ್ನು ಜಪ್ತಿ ಮಾಡಲು ಬೆಂಗಳೂರು ವಲಯ ಕಚೇರಿ ಆದೇಶ ನೀಡಿದೆ ಎಂದು ಕೇಂದ್ರೀಯ ತನಿಖಾ ಸಂಸ್ಥೆ ತಿಳಿಸಿದೆ.
ಸಾವಿರಾರು ಜನರಿಂದ ಸಂಗ್ರಹಿಸಿದ ಷೇರು ಹಣವನ್ನು ಚಿನಿವಾರ ಪೇಟೆಯಲ್ಲಿ ತೊಡಗಿಸುವುದಾಗಿ ಹೂಡಿಕೆದಾರರ ಜತೆ ಐಎಂಎ ಒಪ್ಪಂದ ಮಾಡಿಕೊಂಡಿದೆ. ಆದರೆ ಮನ್ಸೂರ್ ಖಾನ್ ಅಕ್ರಮ ಹಣ ವರ್ಗಾವಣೆ ದಂಧೆ ಬಿಟ್ಟು ಬೇರೆ ಯಾವುದೇ ವ್ಯವಹಾರ ಮಾಡಿಲ್ಲ ಎಂಬುದನ್ನು ಜಾರಿ ನಿರ್ದೇಶನಾಲಯದ ತನಿಖೆಯಿಂದ ಬಹಿರಂಗವಾಗಿದೆ.
ಮನ್ಸೂರ್ ಖಾನ್ ಹೂಡಿಕೆದಾರರಿಗೆ ಶೇ. 2.5ರಿಂದ ಶೇ. 3ರಷ್ಟು ಬಡ್ಡಿ ಅಥವಾ ಲಾಭಾಂಶ ನೀಡುವುದಾಗಿ ಹೇಳಿ ಸಾವಿರಾರು ಜನರಿಗೆ ವಂಚಿಸಿದ್ದಾರೆ. ಹೂಡಿಕೆದಾರರಿಂದ ಬಂದ ಹಣವನ್ನು ಸ್ಥಿರ ಹಾಗೂ ಚರಾಸ್ಥಿ ಖರೀದಿಸಿ, ಅವುಗಳ ಮೇಲೆ ಬ್ಯಾಂಕ್ ಸಾಲ ಪಡೆಯಲು ಯತ್ನಿಸುತ್ತಿದ್ದ ಎಂದು ಇಡಿ ತಿಳಿಸಿದೆ.
ಐಎಂಎ ವಂಚನೆ ಪ್ರಕರಣದ ರುವಾರಿ ಮನ್ಸೂರ್ ಖಾನ್ನನ್ನು ಭಾರತಕ್ಕೆ ಕರೆತರಲು ಎಸ್ಐಟಿ ಮತ್ತು ಇಡಿ ಸತತ ಪ್ರಶ್ರಮ ಪಡುತ್ತಿದ್ದು, ಕೆಲವೇ ದಿನಗಳಲ್ಲಿ ಮನ್ಸೂರ್ ಖಾನ್ ಭಾರತಕ್ಕೆ ಬರುವ ಸಂಭವ ಇದೆ ಎಂದು ಹೇಳಲಾಗುತ್ತಿದೆ.