ಬಾಗಲಕೋಟೆ, ಜೂ29(Daijiworld News/SS): ಜನ ಸಿದ್ದರಾಮಯ್ಯ ಎಂದು ಕರೆಯೋದಿಲ್ಲ ನಿದ್ರಾಮಯ್ಯ ಎಂದೇ ಕರೆಯುತ್ತಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರಗರೊಂದಿಗೆ ಮಾತನಾಡಿದ ಅವರು, ನೀವು ಕೆಲಸ ಮಾಡಲಿಲ್ಲ, ನಿದ್ದೆ ಮಾಡುತ್ತೀರಿ. ಅದಕ್ಕೆ ನಿಮ್ಮನ್ನು ನಿದ್ದೆ ಮಾಡಲು ಕಳಿಸಿದ್ದಾರೆ. ಬಿಜೆಪಿ ಕೋಮುವಾದಿ ಪಕ್ಷ ಎಂದು ಹೇಳಿಕೊಂಡು ಜೆಡಿಎಸ್, ನೀವೂ ಒಂದಾಗಿದ್ದೀರಿ. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಬಗ್ಗೆ ಸಿದ್ದರಾಮಯ್ಯ, ದೇವೇಗೌಡ ಮತ್ತು ಕಾಂಗ್ರೆಸ್ ಶಾಸಕರಲ್ಲೇ ಭಿನ್ನಮತವಿದೆ ಎಂದು ಟೀಕಿಸಿದರು.
ದೇಶದಲ್ಲಿ ಭಯೋತ್ಪಾದಕರ ಅಟ್ಟಹಾಸವನ್ನು ಮೋದಿ ಮಟ್ಟ ಹಾಕಿದ್ದಾರೆ. ದೇಶಕ್ಕಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ ಮಾತ್ರ ಕೆಲಸ ಮಾಡದೆ ಇರೋರಿಗೆ ವೋಟ್ ಹಾಕುತ್ತಿರಾ ಎನ್ನುತ್ತಾರೆ. ಸಿದ್ದರಾಮಯ್ಯ ಮೋದಿಯ ಬಗ್ಗೆ ಅಹಂಕಾರದ ಮಾತುಗಳನ್ನಾಡಿದರು. ಅದಕ್ಕೆ ಜನ ಬಿಜೆಪಿಗೆ ಬಹುಮತ ನೀಡಿದರು ಎಂದು ಹರ್ಷ ವ್ಯಕ್ತಪಡಿಸಿದರು.
ಅಕ್ಕಿ ಕೊಟ್ಟು ಬಾಯಿಗೆ ಬಂದ ಹಾಗೆ ಮಾತನಾಡಿದಕ್ಕೆ ಜನ ಇವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಒಂದು ನಾಮ ಜೆಡಿಎಸ್ಗೆ ಒಂದು ನಾಮ ನಿಮಗೊಂದು ನಾಮ ಹಾಕಿದ್ದಾರೆ. ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಚುನಾವಣೆ ಬಂದರೂ ನಾವು ತೊಡೆ ತಟ್ಟಿ ಸಿದ್ಧರಾಗಿದ್ದೇವೆ ಎಂದು ಹೇಳಿದರು.
ಪಾಪ ಬಾದಾಮಿ ಜನ ಮುಗ್ಧರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನ ಹಣೆಬರಹ ಗೊತ್ತಿಲ್ಲದೆ ಗೆಲ್ಲಿಸಿದರು. ಸೋಲಿನ ಬಗ್ಗೆ ಸಿದ್ದರಾಮಯ್ಯ ಹೇಳಿದ್ದನ್ನು ನಾನು ಅನುಮೋದನೆ ಮಾಡುತ್ತೇನೆ. ರಾಜ್ಯದಲ್ಲಿ ಜನ ನೀವೇನೂ ಕೆಲಸ ಮಾಡಿಲ್ಲ, ನಿದ್ದೆ ಮಾಡಿ ಎಂದು ಮನೆಗೆ ಕಳಿಸಿದ್ದಾರೆ. ಪ್ರಧಾನಿ ಮೋದಿ ಒಳ್ಳೆಯ ಕೆಲಸಗಾರ ಎಂದು ಜನ ವೋಟ್ ಹಾಕಿದ್ದಾರೆ ಎಂದು ಹೇಳಿದರು.