ರಾಯಚೂರು, ಜೂ 29 (Daijiworld News/MSP): ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಯಚೂರಿನ ಕರೇಗುಡ್ಡದಲ್ಲಿ ಗ್ರಾಮ ವಾಸ್ತವ್ಯಕ್ಕೆ ತೆರಳುತ್ತಿದ್ದ ವೇಳೆ ನಡೆದ ಪ್ರತಿಭಟನೆಗೆ ಭದ್ರತಾ ಲೋಪವೇ ಕಾರಣ ಎಂಬ ನೆಪದಲ್ಲಿ ಇಬ್ಬರು ಪೋಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ.
ಯರಗೇರಾ ಠಾಣೆಯ ಸಿಪಿಐ ದತ್ತಾತ್ರೇಯ ಕಾರ್ನಾಡ್, ರಾಯಚೂರು ಗ್ರಾಮಾಂತರ ಠಾಣೆಯ ಪಿಎಸ್ಐ ನಿಂಗಪ್ಪ ಅವರನ್ನು ಅಮಾನತು ಮಾಡಿ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಆದೇಶ ಹೊರಡಿಸಿದ್ದಾರೆ.
ಬುಧವಾರದಂದು ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕರೆಗುಡ್ಡದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಕೈಗೊಂಡಿದ್ದ ಸಂದರ್ಭ, ಯರಮರಸ್ ಅತಿಥಿ ಗೃಹದಿಂದ ತೆರಳುವ ವೇಳೆ ವೈಟಿಪಿಎಸ್ ಗುತ್ತಿಗೆ ಕಾರ್ಮಿಕರು ಪ್ರತಿಭಟನೆ ನಡೆಸಿ ಸಿಎಂ ತೆರಳುತ್ತಿದ್ದ ಬಸ್ ಗೆ ಮುತ್ತಿಗೆ ಹಾಕಿ ಸಿಎಂ ಜೊತೆ ಮಾತಿನ ಚಕಮಕಿ ನಡೆಸಿದ್ದರು.
ಪ್ರತಿಭಟನೆಗಳಿಂದ ಇರುಸು ಮುರುಸುಕೊಂಡ ಮುಖ್ಯಮಂತ್ರಿ , "ವೋಟ್ ಮೋದಿಗೆ ಹಾಕ್ತೀರಾ, ಸಮಸ್ಯೆ ಅವರಲ್ಲೇ ಹೇಳಿ" ಎಂದು ಪ್ರತಿಭಟನಕಾರರನ್ನು ದಭಾಯಿಸಿದ್ದರು. ಮಾತ್ರವಲ್ಲದೆ "ಲಾಠಿಚಾರ್ಜ್ ಮಾಡಬೇಕಾದೀತು" ಎಂದು ಎಚ್ಚರಿಕೆ ನೀಡಿದ್ದರು. ಇದು ರಾಜ್ಯದಾದ್ಯಂತ ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಇದರಿಂದ ಸಿಎಂ ಕುಮಾರಸ್ವಾಮಿ ಮುಜುಗರ ಅನುಭವಿಸಿ ಕ್ಷಮೆಯಾಚನೆ ಮಾಡಬೇಕಾಯಿತು.
ಇದನ್ನು ಭದ್ರತಾ ಲೋಪವೆಂದು ಪರಿಗಣಿಸಿ ಎಸ್.ಪಿ. ಡಾ. ವೇದಮೂರ್ತಿ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ.