ಲಖನೌ, ಜೂ29(Daijiworld News/SS): ಅತಿ ಹಿಂದುಳಿದ ವರ್ಗಗಳಲ್ಲಿದ್ದ 17 ಜಾತಿಗಳಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡಿ ಸಿಎಂ ಯೋಗಿ ಆದಿತ್ಯನಾಥ್ ಆದೇಶ ಹೊರಡಿಸಿದ್ದಾರೆ.
ಅತಿ ಹಿಂದುಳಿದ ವರ್ಗಗಳಾಗಿದ್ದ ಕಶ್ಯಪ್, ರಾಜ್ಭರ್, ಧಿವರ್, ಬಿಂಡ್, ಕುಮಾರ್, ಕಹರ್, ಕೇವತ್, ನಿಶಾದ್, ಭಾರ್, ಮಲ್ಹಾ, ಪ್ರಜಾಪತಿ, ಭಾಟಂ, ತುರ್ಹಾ, ಗೋಡಿಯಾ, ಮಂಜುಲ್ ಮತ್ತು ಮಧುವಾ ಸೇರಿ 17 ಸಮುದಾಯದವರಿಗೆ ಇನ್ಮುಂದೆ ಎಸ್ಸಿ ಎಂಬ ಪ್ರಮಾಣಪತ್ರ ನೀಡಲಾಗುತ್ತದೆ. ಈ ಜಾತಿಗಳಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡುವಂತೆ ಅಲಹಾಬಾದ್ ಹೈಕೋರ್ಟ್ 2017ರಲ್ಲೇ ಆದೇಶಿಸಿತ್ತು. ಆ ಆದೇಶವನ್ನು ಈಗ ಜಾರಿಗೊಳಿಸಲು ಯೋಗಿ ಆದಿತ್ಯನಾಥ್ ನಿರ್ಧರಿಸಿದ್ದಾರೆ.
ಅಲಹಾಬಾದ್ ಹೈಕೋರ್ಟ್ ಅಂತಿಮ ಆದೇಶ ಹೊರಡಿಸುವವರೆಗೂ ಈ ಜಾತಿಗಳವರಿಗೆ ಎಸ್ಸಿ ಪ್ರಮಾಣಪತ್ರ ನೀಡುವಂತೆ ಉತ್ತರ ಪ್ರದೇಶದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸಿಎಂ ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ.
2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿಎಂ ಆದಿತ್ಯನಾಥ ಈ ನಿರ್ಧಾರ ಕೈಗೊಂಡಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ಇದಕ್ಕೆ ಸಮ್ಮತಿಸುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.
ಮುಲಾಯಂ ಸಿಂಗ್ ಯಾದವ್ 2006ರಲ್ಲಿ ತಾವು ಸಿಎಂ ಆಗಿದ್ದಾಗ ಈ ಆದೇಶವನ್ನು ಜಾರಿಗೊಳಿಸಲು ಪ್ರಯತ್ನಿಸಿದ್ದರು. ಅವರಂತೆ 2007-2012ರ ನಡುವೆ ಸಿಎಂ ಆಗಿದ್ದ ಮಾಯಾವತಿ ಕೂಡ ಇಂಥದ್ದೇ ಪ್ರಯತ್ನ ಮಾಡಿದ್ದರು. ಆದರೆ, ಕೇಂದ್ರ ಸರ್ಕಾರ ಇವರಿಬ್ಬರ ನಿರ್ಧಾರಕ್ಕೆ ಅಡ್ಡಗಾಲು ಹಾಕಿತ್ತು.