ಬೆಂಗಳೂರು, ಜೂ29(Daijiworld News/SS): ಸರ್ಕಾರ ಸತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಯಾವ ಸಮಯದಲ್ಲಾದರೂ ಸರ್ಕಾರ ಬೀಳಬಹುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದೆ. ಇದನ್ನು ಬಹಳ ಸಮಯ ಸಹಿಸಿಕೊಳ್ಳಲು ಸಾದ್ಯವಿಲ್ಲ. ಯಾವ ಸಮಯದಲ್ಲಾದರೂ ಸರ್ಕಾರ ಬೀಳಬಹುದು. ನಾವು ಯಾವ ಎಂಎಲ್ಎ ಅನ್ನು ಬನ್ನಿ ಎಂದು ಕರೆಯುತ್ತಿಲ್ಲ. ಅವರೇ ಬಿಟ್ಟು ಬಂದು ಸರ್ಕಾರ ಬಿದ್ದರೆ, ನಾವು ಅದಕ್ಕೆ ಜವಬ್ದಾರರಲ್ಲ ಎಂದು ಹೇಳಿದರು.
ನಿಮಗೆ ಯೋಗ್ಯತೆ ಇದ್ದರೆ ಸರಿಯಾಗಿ ಆಡಳಿತ ನಡೆಸಿ, ಇಲ್ಲ ಆಡಳಿತವನ್ನು ಬಿಟ್ಟು ಹೋಗಿ. ರಾಜ್ಯದ ಮತದಾರರು ಚುನಾವಣೆಗೆ ಸಿದ್ಧರಿಲ್ಲ. ಅವರು ತಮ್ಮ ಕಷ್ಟಗಳ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸಿ. ಸರ್ಕಾರ ಸತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಬರ ಇರುವಾಗ ಅಮೆರಿಕಾ ಪ್ರವಾಸ ಬೇಕಿತ್ತಾ? ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಕೇಂದ್ರ ಸಚಿವ ಸದಾನಂದ ಗೌಡ, ಕರ್ತವ್ಯಕ್ಕೆ ಮೊದಲ ಆದ್ಯತೆ, ನಂತರ ಅಧಿಕಾರ ಎರಡನೇಯದು. ಒಬ್ಬ ಎಂಎಲ್ಎ ಆಗಿ ನಾನು ಏನು ಮಾಡಬೇಕು, ಕೇಂದ್ರ ಸಚಿವನಾಗಿ ರಾಜ್ಯಕ್ಕೆ ಏನು ಮಾಡಬೇಕು ಅದನ್ನು ನಾನು ಮಾಡುತ್ತೇನೆ. ನನ್ನ ಪಕ್ಷದ ಘಟನೆ-ಗೌರವವನ್ನು ಎತ್ತಿ ಹಿಡಿಯುತ್ತೇನೆ. ಅತ್ಯಂತ ಶೀಘ್ರವಾಗಿ ಕರ್ನಾಟಕದಲ್ಲೂ ಕೂಡ ನಮ್ಮ ಸರ್ಕಾರ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರ ಬಂದಾಗ ರಾಜ್ಯ ಮತ್ತು ಕೇಂದ್ರ ಒಂದೇ ದಿಸೆಯಲ್ಲಿ ಮುಂದೆ ಹೋಗುವಂತೆ ಆಗುತ್ತದೆ. ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡೋಣ ಎಂದು ಹೇಳಿದ್ದಾರೆ.