ಫರಿದಾಬಾದ್,ಜೂ29(DaijiworldNews/AZM): ಹರ್ಯಾಣದ ಕಾಂಗ್ರೆಸ್ ವಕ್ತಾರ ವಿಕಾಸ್ ಚೌಧರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಇಬ್ಬರು ಆರೋಪಿಗಳನ್ನು ಫರೀದಾಬಾದ್ ಪೊಲೀಸರು ಬಂಧಿಸಿದ್ದಾರೆ.
ಕಳೆದ ಗುರುವಾರ ಅಪರಿಚಿತ ದುಷ್ಕರ್ಮಿಗಳು ಚೌಧರಿ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು. ಅವರನ್ನು ಹತ್ಯೆಗೈಯಲು ಕೌಶಲ್ ಎಂಬಾತನ ಜೊತೆ ಪಿತೂರಿ ನಡೆಸಿದ ಆರೋಪದಲ್ಲಿ ರೋಶನಿ ಮತ್ತು ನರೇಶ್ ಎಂಬಿಬ್ಬರನ್ನು ಬಂಧಿಸಲಾಗಿದೆ. ಚೌಧರಿಯತ್ತ ಗುಂಡು ಹಾರಿಸಿದ ಆರೋಪ ಎದುರಿಸುತ್ತಿರುವ ವಿಕಾಸ್ ಮತ್ತು ಸಚಿನ್ಗೆ ಆಯುಧಗಳನ್ನು ಒದಗಿಸಿಕೊಡುವಲ್ಲಿ ಬಂಧಿತ ಆರೋಪಿಗಳು ಪ್ರಮುಖ ಪಾತ್ರವಹಿಸಿದ್ದರು ಎಂದು ಪೊಲೀಸ್ ಹೆಚ್ಚುವರಿ ಪ್ರಧಾನ ನಿರ್ದೇಶಕ ನವದೀಪ್ ಸಿಂಗ್ ವರ್ಕ್ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಈ ಹತ್ಯೆಗೆ ಕಾರಣ ಹಣದ ವಿವಾದ ಎಂದು ತಿಳಿದುಬಂದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಸದ್ಯ ಬಂಧಿತರ ವಿಚಾರಣೆ ನಡೆಯುತ್ತಿದ್ದು ಅವರಿಂದ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹರ್ಯಾಣದ ಸೆಕ್ಟರ್ 9ರಲ್ಲಿ ಜಿಮ್ನ ಹೊರಗಡೆ ವಿಕಾಸ್ ಚೌದರಿ ತನ್ನ ಕಾರ್ ಪಾರ್ಕ್ ಮಾಡುತ್ತಿದ್ದ ಸಂದರ್ಭ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.
ಸ್ಥಳದಲ್ಲಿ ಪೊಲೀಸರಿಗೆ 12 ಕಾಟ್ರಿಡ್ಜ್ಗಳು ದೊರಕಿವೆ. ಪೊಲೀಸರ ಪ್ರಕಾರ ಈ ಗುಂಡಿನ ದಾಳಿಯಲ್ಲಿ ನಾಲ್ಕು ಮಂದಿ ಭಾಗಿಯಾಗಿದ್ದರು. ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರದಲ್ಲಿ ಇಬ್ಬರು ದುಷ್ಕರ್ಮಿಗಳು ಕಾರಿನತ್ತ ಆಗಮಿಸಿ ಗುಂಡಿನ ದಾಳಿ ನಡೆಸುವುದು ದಾಖಲಾಗಿದೆ.