ರಾಯಚೂರು,ಜೂ29(DaijiworldNews/AZM): : ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ತೆರಳುತ್ತಿದ್ದ ಬಸ್ ತಡೆದು ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 50 ಜನ ಹೋರಾಟಗಾರರ ವಿರುದ್ಧ ಕೇಸು ದಾಖಲಾಗಿದೆ.
ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರು ಕರೇಗುಡ್ಡ ಗ್ರಾಮ ವಾಸ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಅವರ ಬಸ್ ತಡೆದು ಪ್ರತಿಭಟನೆ ನಡೆಸಲಾಗಿತ್ತು. ಈ ಹಿನ್ನಲೆ ಭದ್ರತಾ ಲೋಪದ ಕಾರಣ ಯರಗೇರಾ ವೃತ್ತದ ಇನ್ ಸ್ಪೆಕ್ಟರ್ ದತ್ತಾತ್ರೇಯ ಕಾರ್ನಾಡ ಮತ್ತು ರಾಯಚೂರು ಗ್ರಾಮೀಣ ಠಾಣೆಯ ಸಬ್ ಇನ್ಸ್ಪೆಕ್ಟರ್ ನಿಂಗಪ್ಪ ಅವರನ್ನು ಬಳ್ಳಾರಿ ವಲಯದ ಐಜಿಪಿ ನಂಜುಂಡಸ್ವಾಮಿ ಅಮಾನತುಗೊಳಿಸಿದ್ದಾರೆ. ಅಲ್ಲದೇ ಸಿಪಿಐ(ಎಂಎಲ್) ಟಿಯುಸಿಐ ಅಧ್ಯಕ್ಷ ಆರ್. ಮಾನಸಯ್ಯ, ಕಾರ್ಯದರ್ಶಿ ಜಿ. ಅಮರೇಶ್ ಎಂಬುವರ ವಿರುದ್ಧವೂ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸಿಎಂ ತೆರಳುತ್ತಿದ್ದ ಸರ್ಕಾರಿ ಬಸ್ ಎದುರು ಪ್ರತಿಭಟನೆ ನಡೆಸಿದ್ದ 50 ಕಾರ್ಮಿಕರ ವಿರುದ್ಧವೂ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.