ಬೆಂಗಳೂರು, ಜೂ30(Daijiworld News/SS): ಕಾಂಗ್ರೆಸ್ನವರೇ ಕುಮಾರಸ್ವಾಮಿಯನ್ನು ಸಿಎಂ ಅಂತಾ ಘೋಷಿಸಿದರು ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶ ನಮಗೆ ಇರಲಿಲ್ಲ. ಅವರನ್ನು ಸಿಎಂ ಮಾಡಿ ಎಂದು ಕಾಂಗ್ರೆಸ್ನವರ ಬಳಿ ನಾವು ಕೇಳಿರಲಿಲ್ಲ. 37 ಸ್ಥಾನಗಳನ್ನು ಇಟ್ಟುಕೊಂಡು ಸಿಎಂ ಸ್ಥಾನ ಕೇಳಲು ಸಾಧ್ಯವಿಲ್ಲ. ಆದರೆ, ಕಾಂಗ್ರೆಸ್ ಹೈಕಮಾಂಡ್ ಒತ್ತಾಯಕ್ಕೆ ಕುಮಾರಸ್ವಾಮಿ ಸಿಎಂ ಆಗಬೇಕಾಯಿತು ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶ ಇರಲಿಲ್ಲ. ಮುಖ್ಯಮಂತ್ರಿ ಸ್ಥಾನ ನಮಗೆ ಬೇಡ ಎಂದಿದ್ದೆ. ಆದರೆ, ರಾಹುಲ್ ಮತ್ತು ಸೋನಿಯಾ ಗಾಂಧಿ ಅವರೇ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು ಎಂದರು. ಮಲ್ಲಿಕಾರ್ಜುನ ಖರ್ಗೆಯವರೂ ಒತ್ತಡ ಹೇರಿದ್ದರು. ಕಾಂಗ್ರೆಸ್ನವರೇ ಕುಮಾರಸ್ವಾಮಿ ಸಿಎಂ ಎಂದು ಘೋಷಿಸಿದರು ಎಂದು ತಿಳಿಸಿದ್ದಾರೆ.
ನಾನು ಇನ್ನು ಮುಂದೆ ಯಾವುದೇ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿಯೂ ಸ್ಪರ್ಧಿಸುವ ಉದ್ದೇಶ ಇರಲಿಲ್ಲ. ಆದರೆ, ಆಕಸ್ಮಿಕವಾಗಿ ಸ್ಪರ್ಧೆಗೆ ಇಳಿಯಬೇಕಾಯಿತು. ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನಾನು ದೆಹಲಿಗೆ ಹೋಗುವ ಸನ್ನಿವೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪಕ್ಷದ ಕಚೇರಿಯಲ್ಲಿಯೇ ಇದ್ದು ಎಲ್ಲ ಬೆಳವಣಿಗೆಗಳನ್ನು ಗಮನಿಸಿದ್ದೇನೆ. ಪಕ್ಷದ ಸಂಘಟನೆಗೆ ಸಾಕಷ್ಟು ದುಡಿದಿದ್ದೇನೆ. ಇನ್ನು ಮುಂದೆ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿ ದೆಹಲಿಗೆ ಹೋಗುವ ಇಚ್ಛೆ ಇಲ್ಲ. ನಾನು ಇದುವರೆಗೂ ರಾಜಕೀಯ ಜೀವನದಲ್ಲಿ ಕುಟುಂಬ ರಾಜಕಾರಣ ಮಾಡಿಲ್ಲ ಎಂದು ಹೇಳಿದರು.