ನವದೆಹಲಿ, ಜೂ30(Daijiworld News/SS): ವರ್ಷಾಂತ್ಯಕ್ಕೆ ನಡೆಯಲಿರುವ ಚುನಾವಣೆ ಪೂರ್ಣಗೊಳ್ಳುವವರೆಗೆ ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ ಪತನಗೊಳಿಸುವ ಯತ್ನಕ್ಕೆ ಕೈಹಾಕದಂತೆ ಪಕ್ಷದ ಹೈಕಮಾಂಡ್ ರಾಜ್ಯ ಬಿಜೆಪಿ ಮುಖಂಡರಿಗೆ ಸೂಚಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮಹಾರಾಷ್ಟ್ರ, ಜಾರ್ಖಂಡ್ ಮತ್ತು ಹರಿಯಾಣ ವಿಧಾನಸಭೆಗಳಿಗೆ ಮುಂದಿನ ಅಕ್ಟೋಬರ್ ವೇಳೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಒಂದೊಮ್ಮೆ ಕರ್ನಾಟಕದ ಸಮ್ಮಿಶ್ರ ಸರ್ಕಾರ ಪತನಕ್ಕೆ ಕೈಹಾಕಿದಲ್ಲಿ, ಈ ಚುನಾವಣೆಗಳ ಫಲಿತಾಂಶದ ಮೇಲೆ ಪರಿಣಾಮ ಉಂಟಾಗಬಹುದು ಎಂಬ ಕಾರಣದಿಂದ ಈ ನಿರ್ದೇಶನ ನೀಡಲಾಗಿದೆ ಎನ್ನಲಾಗಿದೆ.
ರಾಜ್ಯದಲ್ಲಿ ಸದ್ಯ ಆಪರೇಷನ್ ಕಮಲಕ್ಕೆ ಮುಂದಾಗದೆ, ಕಾಂಗ್ರೆಸ್– ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ವೈಫಲ್ಯಗಳ ಬಗ್ಗೆ ದನಿ ಎತ್ತಬೇಕು ಎಂದು ಕೇಂದ್ರದ ಗೃಹ ಸಚಿವರೂ ಆಗಿರುವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಕಿವಿಮಾತು ಹೇಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದೆ.
ಚುನಾವಣೆ ಎದುರಿಸಲಿರುವ ಮೂರು ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಇದ್ದು, ಕರ್ನಾಟಕ ಮತ್ತಿತರ ಕಡೆ ಬಿಜೆಪಿಯೇತರ ಸರ್ಕಾರಗಳ ಪತನಕ್ಕೆ ಯತ್ನಿಸಿದರೆ ಮತದಾರರಲ್ಲಿ ತಪ್ಪು ಸಂದೇಶ ರವಾನೆಯಾಗಲಿದೆ. ಹಾಗಾಗಿ ಚುನಾವಣೆ ಪೂರ್ಣಗೊಳ್ಳುವವರೆಗೆ ವಿಪಕ್ಷಗಳ ಆರೋಪಗಳಿಗೆ ಆಸ್ಪದ ನೀಡದೆ ಸುಮ್ಮನೆ ಇರುವುದು ಸೂಕ್ತ ಎಂಬ ಸಂದೇಶವನ್ನು ಕೇಂದ್ರ ರಾಜ್ಯಕ್ಕೆ ರವಾನಿಸಿದೆ.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಉರುಳಿಸಿ, ಬಿಜೆಪಿ ಸರ್ಕಾರ ರಚಿಸುವ ಯತ್ನ ಬೇಡ ಎಂದು ಅಮಿತ್ ಶಾ ಸೂಚಿಸಿರುವುದರಿಂದ ರಾಜ್ಯದಲ್ಲಿ ದಿಢೀರ್ ರಾಜಕೀಯ ಬದಲಾವಣೆ ನಿರೀಕ್ಷಿಸುವಂತಿಲ್ಲ.