ಜಮ್ಮು, ಜೂ30(Daijiworld News/SS): ಭಯವನ್ನು ಮೀರಿದ ಭಕ್ತಿ, ಪ್ರಾಕೃತಿಕ ಸಂಕಟಗಳನ್ನೂ ಎದುರಿಸಿ ನಿಲ್ಲುವ ಯಾತ್ರೆಗೆ ಹೆಸರಾದ ವಾರ್ಷಿಕ ಅಮರನಾಥ ಯಾತ್ರೆಗೆ ಭಾನುವಾರ ಬೆಳಗ್ಗೆ ಚಾಲನೆ ದೊರಕಿದೆ.
ಅಮರನಾಥ ಯಾತ್ರೆ ಜುಲೈ 1ರಿಂದ ಆಗಸ್ಟ್ 15ರವರೆಗೆ ನಡೆಯುವ ವಾರ್ಷಿಕ ಯಾತ್ರೆಯಾಗಿದ್ದು, ವ್ಯಾಪಕ ಭದ್ರತೆಯ ನಡುವೆ ಮೊದಲ ತಂಡ ಗುಹಾಂತರ ದೇಗುಲಕ್ಕೆ ಪ್ರಯಾಣ ಆರಂಭಿಸಿದೆ. 45 ದಿನಗಳ ಕಾಲ ನಡೆಯುವ ಪವಿತ್ರ ಯಾತ್ರೆ ಅಗಸ್ಟ್ 15ರ ಶ್ರಾವಣ ಪೂರ್ಣಿಮೆಯವರೆಗೆ ನಡೆಯಲಿದೆ.
ಬಾಲ್ತಾಲ್ ಬೇಸ್ ಕ್ಯಾಂಪ್ನಿಂದ 1,051 ಮಂದಿ ಯಾತ್ರಿಕರು, ಪಹಲ್ಗಾಮ್ ಬೇಸ್ ಕ್ಯಾಂಪ್ನಿಂದ 1,183 ಮಂದಿ ಯಾತ್ರೆ ಆರಂಭಿಸಿದ್ದಾರೆ. ಯಾತ್ರಿಗಳ ಪೈಕಿ 333 ಮಹಿಳೆಯರು, 45 ಸಾಧುಗಳು ಮತ್ತು 17 ಮಕ್ಕಳು ಸೇರಿದ್ದಾರೆ.
3 ಸಾವಿರಕ್ಕೂ ಹೆಚ್ಚು ಮೀಟರ್ ಎತ್ತರದಲ್ಲಿರುವ ಹಿಮ ಲಿಂಗದ ದರ್ಶನಕ್ಕಾಗಿ ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈಗಾಗಲೆ ಕಾಶ್ಮೀರಕ್ಕೆ ತೆರಳಿ ಭದ್ರತಾ ಪರಿಶೀಲನೆ ನಡೆಸಿದ್ದಾರೆ.
ನೂರಾರು ಸಾಧು ಸಂತರು ಮತ್ತು ಭಕ್ತರು ಈಗಾಗಲೇ ಜಮ್ಮುವಿನಲ್ಲಿ ಬೀಡುಬಿಟ್ಟಿದ್ದಾರೆ. 3,880 ಮೀಟರ್ ಎತ್ತರದಲ್ಲಿರುವ ನೈಸರ್ಗಿಕ ಮಂಜಿನ ಶಿವಲಿಂಗವನ್ನು ಕಾಣುವುದಕ್ಕಾಗಿ ನಡೆಯುವ ಈ ಯಾತ್ರೆಗೆ ಈ ಬಾರಿ ಈಗಾಗಲೇ 1.5 ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದಾರೆ. ಈ ಬಾರಿಯ ಅಮರನಾಥ ಯಾತ್ರೆ ರಕ್ಷಾಬಂಧನ ಮತ್ತು ಸ್ವಾತಂತ್ರ್ಯ ದಿನಾಚರಣೆಯ ದಿನವೇ ಅಂತ್ಯಗೊಳ್ಳುವುದು ವಿಶೇಷ.
ಭಾನುವಾರ 3 ಗಂಟೆಯವರೆಗೆ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಏಕಮುಕ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಯಾತ್ರಿಕರು ಜವಹಾರ್ ಗುಹೆಯನ್ನು ದಾಟಿದ ಬಳಿಕ ಬೇರೆ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿ ಕೊಡಲಾಗುತ್ತಿದೆ. ಯಾತ್ರಿಕರ ಸಂಪೂರ್ಣ ಭದ್ರತೆಗಾಗಿ 60 ಸಾವಿರ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಅಮರನಾಥ ಯಾತ್ರೆಯ ಮೇಲೆ ಪ್ರತಿ ವರ್ಷದಂತೆ ಈ ವರ್ಷವೂ ಉಗ್ರರ ಕಣ್ಣು ಇದ್ದೇ ಇರುತ್ತದೆ. ಅದರಲ್ಲೂ ಈ ವರ್ಷದ ಫೆಬ್ರವರಿಯಲ್ಲಿ ನಡೆದ ಪುಲ್ವಾಮಾ ದಾಳಿಯ ಬಳಿಕ ಆತಂಕ ಇನ್ನೂ ಹೆಚ್ಚಾಗಿದೆ. ಇದಕ್ಕಾಗಿ ಯಾತ್ರೆಗೆ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಜಮ್ಮುವಿನ ಐಜಿಪಿ ಎಂ.ಕೆ. ಸಿನ್ಹಾ ಹಾಗೂ ವಿಭಾಗೀಯ ಕಮಿಷನರ್ ಸಂಜೀವ್ ವರ್ಮ ತಿಳಿಸಿದ್ದಾರೆ.