ನವದಹೆಲಿ, ಜೂ30(Daijiworld News/SS): ಕಳೆದ ಫೆಬ್ರವರಿಯಲ್ಲಿ ನಾನು ಮನ್ ಕಿ ಬಾತ್ ನಲ್ಲಿ ಇನ್ನು ಕೆಲವೇ ತಿಂಗಳಲ್ಲಿ ನಿಮ್ಮ ಮುಂದೆ ಮತ್ತೆ ಬರುತ್ತೇನೆ ಎಂದಾಗ ಕೆಲವರು ನಾನು ಅತಿಯಾದ ಆತ್ಮವಿಶ್ವಾಸ ತೋರಿಸುತ್ತಿದ್ದೇನೆ ಎಂದರು. ಆದರೆ ನನಗೆ ಜನರ ಮೇಲೆ ನಂಬಿಕೆಯಿತ್ತು ಎಂದು ಪ್ರಧಾನಿ ಮೋದಿ ತಾವು ಮತ್ತೆ ಪ್ರಧಾನಿಯಾದ ಬಗ್ಗೆ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಹೇಳಿದರು.
ಮನ್ ಕಿ ಬಾತ್ ರೇಡಿಯೋ ಸರಣಿ ಕಾರ್ಯಕ್ರಮ ದೇಶದ 130 ಕೋಟಿ ಭಾರತೀಯರ ಸಾಮರ್ಥ್ಯಗಳ ಉತ್ಸಾಹವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಲೋಕಸಭೆ ಚುನಾವಣೆ ನಂತರ ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಪ್ರತಿ ತಿಂಗಳ ಕೊನೆಯ ಭಾನುವಾರದ ರೇಡಿಯೊ ಕಾರ್ಯಕ್ರಮ ಮನ್ ಕಿ ಬಾತ್'ನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಪುನರಾರಂಭಿಸಿದ್ದಾರೆ.
ಕೇದರನಾಥ್ ಗುಹೆಯಲ್ಲಿ ಧ್ಯಾನ ಮಾಡಿದ ವಿಚಾರವಾಗಿ ಮಾತನಾಡಿದ ಅವರು, ನನ್ನ ಅಂತರಾತ್ಮವನ್ನು ಕಂಡುಕೊಳ್ಳಲು ಕೇದಾರನಾಥ ಯಾತ್ರೆ ಮಾಡಿ ಗುಹೆಯಲ್ಲಿ ಏಕಾಂತವಾಗಿ ಕುಳಿತು ಧ್ಯಾನ ಮಾಡಿದೆ. ಮನ್ ಕಿ ಬಾತ್ ನಲ್ಲಿ ಹಲವು ತಿಂಗಳುಗಳಿಂದ ಮಾತನಾಡದೆ ಉಂಟಾಗಿದ್ದ ನಿರ್ವಾತ ಸ್ಥಿತಿಯನ್ನು ಕೇದಾರನಾಥ ಗುಹೆಯಲ್ಲಿ ಕಂಡುಕೊಳ್ಳಲು ಅವಕಾಶ ಸಿಕ್ಕಿತು. ಆದರೆ ನನ್ನ ಈ ಯಾತ್ರೆ ಮತ್ತು ಗುಹೆಯಲ್ಲಿ ಮಾಡಿದ ಧ್ಯಾನವನ್ನು ಕೆಲವರು ರಾಜಕೀಯಗೊಳಿಸಲು ನೋಡಿದರು ಎಂದು ಹೇಳಿದರು.
ನಮ್ಮ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿಕೆ ಮಾಡಿದಾಗ ಕೇವಲ ರಾಜಕೀಯ ವಲಯದಲ್ಲಿ ಅಥವಾ ರಾಜಕೀಯ ನಾಯಕರು ಮಾತ್ರ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಲ್ಲ, ಜೈಲಿಗೆ ಮಾತ್ರ ಚಳವಳಿ ಸೀಮಿತವಾಗಿರಲಿಲ್ಲ, ಪ್ರತಿಯೊಬ್ಬರ ಆತ್ಮಸಾಕ್ಷಿಯಲ್ಲಿ ಸಿಟ್ಟು, ಆಕ್ರೋಶ, ಬೇಸರವಿದ್ದಿತು ಎಂದು ಹೇಳಿದರು.
ನಾನು ಪ್ರಧಾನಿಯಾಗಿಲ್ಲ, ಜನರೇ ನನ್ನನ್ನು ಪ್ರಧಾನಿಯಾಗಿ ಮಾಡಿದ್ದಾರೆ. ಪ್ರಜಾಪ್ರಭುತ್ವ ನಮ್ಮ ಸಂಸ್ಕೃತಿ, ಪರಂಪರೆಯಾಗಿದೆ. ‘ಮನ್ ಕಿ ಬಾತ್’ ವಿಚಾರವಾಗಿ ಜನ ಪತ್ರ ಬರೆಯುತ್ತಿದ್ದಾರೆ. ಸಮಸ್ಯೆ, ಸವಾಲುಗಳ ಕುರಿತು ಪ್ರಸ್ತಾಪಿಸಿ ಅದರ ಬಗ್ಗೆ ಮಾತನಾಡುವಂತೆ ಸಲಹೆ ನೀಡುತ್ತಿದ್ದಾರೆ. ಜನರಿಂದ ಉತ್ತಮ ಸ್ಪಂದನೆ ದೊರೆತಿದೆ ಎಂದು ಹೇಳಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ 61 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ಚುನಾವಣೆಯಿದು. ಅರುಣಾಚಲ ಪ್ರದೇಶದ ಕುಗ್ರಾಮದಲ್ಲಿ ಕೂಡ ಒಬ್ಬ ಮತದಾರರಿಗೆ ಮತಗಟ್ಟೆಯನ್ನು ತೆರೆಯಲಾಯಿತು. ಚುನಾವಣೆಯಲ್ಲಿ ಜನರ ಉತ್ಸಾಹ ಅತ್ಯದ್ಬುತವಾಗಿತ್ತು. ಜನರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಟ್ಟಿರುವ ನಂಬಿಕೆಯನ್ನು ಇದು ತೋರಿಸುತ್ತದೆ ಎಂದು ಹೇಳಿದರು.
ನೀರಿನ ಸಂರಕ್ಷಣೆ ಮಹತ್ವವನ್ನು ಪ್ರಧಾನಿ ಮೋದಿ ಇಂದಿನ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದು, ನೀರಿನ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಹೊಸ ಜಲಶಕ್ತಿ ಸಚಿವಾಲಯವನ್ನು ದೇಶದಲ್ಲಿ ಸ್ಥಾಪಿಸಲಾಗಿದೆ. ನೀರಿನ ವಿಷಯಗಳಿಗೆ ಸಂಬಂಧಿಸಿದಂತೆ ಸಚಿವಾಲಯ ಕ್ಷಿಪ್ರ ನಿರ್ಧಾರ ಮಾಡುತ್ತದೆ. ಪ್ರತಿವರ್ಷ ದೇಶದ ವಿವಿಧ ಭಾಗಗಳಲ್ಲಿ ನೀರಿನ ಸಮಸ್ಯೆ ತಲೆದೋರುತ್ತದೆ. ನಮ್ಮ ದೇಶದಲ್ಲಿ ಇಡೀ ವರ್ಷದಲ್ಲಿ ಕೇವಲ ಶೇಕಡಾ 8ರಷ್ಟು ಮಾತ್ರ ಮಳೆ ನೀರು ಕೊಯ್ಲು ನಡೆಯುತ್ತದೆ. ನೀರಿನ ಸಂರಕ್ಷಣೆ ಬಗ್ಗೆ ಸಮಾಜದ ಎಲ್ಲಾ ವರ್ಗಗಳಲ್ಲಿರುವ ಪ್ರಮುಖ ಜನರು ಅರಿವು ಮೂಡಿಸಬೇಕು ಎಂದು ಮನವಿ ಮಾಡಿದರು.