ಭೋಪಾಲ್, ಅ. 08 (DaijiworldNews/AA): ಮಧ್ಯಪ್ರದೇಶದಲ್ಲಿ ಮಾರಕ ಕೆಮ್ಮಿನ ಸಿರಪ್ ಸೇವಿಸಿ ಕಿಡ್ನಿ ವೈಫಲ್ಯವಾಗಿ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಮತ್ತೆ 6 ಮಕ್ಕಳು ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸಾವನ್ನಪ್ಪಿದ ಮಕ್ಕಳ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

ಈ ಮೊದಲು ಮಧ್ಯಪ್ರದೇಶದ ಛಿಂದ್ವಾಡದ 14 ಮಕ್ಕಳು ವಿಷಕಾರಿ ಕೆಮ್ಮಿನ ಸಿರಪ್ ಸೇವಿಸಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ದೃಢಪಡಿಸಿತ್ತು. ಬಳಿಕ ಮತ್ತೆ ಅ.7ರಂದು ಛಿಂದ್ವಾಡದಲ್ಲಿ 4 ಹಾಗೂ ಬೇತುಲ್ನಲ್ಲಿ 2 ಮಕ್ಕಳು ಮೃತಪಟ್ಟಿದ್ದಾರೆ. ಇನ್ನೂ 6 ಮಕ್ಕಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 5 ಮಕ್ಕಳ ಸ್ಥಿತಿ ಗಂಭೀರವಾಗಿದೆ.
ಕೆಮ್ಮಿನ ಸಿರಪ್ ಸೇವಿಸಿ ಅಸ್ವಸ್ಥರಾದ ಮಕ್ಕಳ ಚಿಕಿತ್ಸೆಯ ಖರ್ಚನ್ನು ತಾನೇ ಭರಿಸುವುದಾಗಿ ಮಧ್ಯಪ್ರದೇಶ ಸರ್ಕಾರ ಘೋಷಿಸಿದೆ. ಈಗಾಗಲೇ ಔಷಧಿ ಉತ್ಪಾದಕ ಕಂಪನಿಗೆ ತಮಿಳುನಾಡು ಸರ್ಕಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಇನ್ನೂ ಪಂಜಾಬ್ ಸರ್ಕಾರ ಕೂಡ ಸಿರಪ್ ಅನ್ನು ನಿಷೇಧಿಸಿದೆ. ಇದರೊಂದಿಗೆ ಪಂಜಾಬ್ ಸಿರಪ್ ನಿಷೇಧಿಸಿದ 6ನೇ ರಾಜ್ಯವಾಗಿ ಹೊರಹೊಮ್ಮಿದೆ. ಸಿರಪ್ ಕುರಿತು ಸಿಬಿಐ ತನಿಖೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟಿಗೂ ಅರ್ಜಿ ಸಲ್ಲಿಸಲಾಗಿದೆ.