ಆಂಧ್ರಪ್ರದೇಶ, ಅ. 08 (DaijiworldNews/TA): ಅನಕಪಲ್ಲಿ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿ ಆರು ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಟಾಕಿ ಉತ್ಪಾದನಾ ಘಟಕಕ್ಕೆ ಅಗತ್ಯ ಪರವಾನಗಿ ದೊರೆತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವ ಕಾರಣಕ್ಕೆ ಬೆಂಕಿ ತಗುಲಿದೆಯೆಂಬುದರ ಕುರಿತು ತನಿಖೆ ಮುಂದುವರಿದಿದೆ. ಘಟನೆಯ ಸ್ಥಳದಲ್ಲಿ ಅಗ್ನಿಶಾಮಕದಳ ಕೂಡಲೇ ಕಾರ್ಯಪ್ರವೃತ್ತವಾಗಿದ್ದು, ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟಿದೆ.
ಇದೇ ಕಾರ್ಖಾನೆಯಲ್ಲಿ ಕೆಲ ತಿಂಗಳ ಹಿಂದೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದ್ದು ವರದಿಯಾಗಿತ್ತು. ಈ ಪೈಕಿ ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಅಂದಿನಿಂದಲೂ ಸುರಕ್ಷತಾ ಕ್ರಮಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಆಗಾಗ್ಗೆ ಎಚ್ಚರಿಕೆಗಳು ಬರುತ್ತಿದ್ದರೂ, ಮತ್ತೆ ಇಂತಹ ದುರಂತ ಸಂಭವಿಸಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.