ಬೆಂಗಳೂರು,ಅ. 08 (DaijiworldNews/AK): ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಯಾವುದೇ ರೀತಿಯ ಔಷಧಿಗಳ ಕೊರತೆ ಎದ್ದು ಕಾಣದಂತೆ ರಾಜ್ಯ ಸರಕಾರ ನೋಡಿಕೊಳ್ಳಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.

ಕೆಲವು ದೂರು ಬಂದ ಕಾರಣ ಇಂದು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ಕೊಟ್ಟ ಅವರು ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿರು. ಸುಮಾರು 75 ರಷ್ಟು ಔಷಧಗಳು ಇಲ್ಲಿ ಸಿಗುತ್ತವೆ. ಉಳಿದವನ್ನು ಸರಕಾರ ಒದಗಿಸಬೇಕಿದೆ ಎಂದು ನುಡಿದರು.
ಬಡವರಿಗೆ ಔಷಧಿ ಅಂಗಡಿಗಳಲ್ಲಿ ಹೋಗಿ ಕೊಳ್ಳುವ ಶಕ್ತಿ ಇರುವುದಿಲ್ಲ; ಇದನ್ನು ಸರಕಾರ ಸೂಕ್ಷ್ಮವಾಗಿ ಗಮನಿಸಬೇಕು ಎಂದು ಒತ್ತಾಯಿಸಿದರು. ವೈದ್ಯರ ಕೆಲವು ಕೊರತೆಗಳೂ ಎದ್ದು ಕಾಣುತ್ತವೆ ಎಂದು ತಿಳಿಸಿದ ಅವರು, ಅವರನ್ನು ಕೇಳಿದ್ದೇನೆ. ಕೆಲವು ಭಾಗಗಳಲ್ಲಿ ಹಿರಿಯ ವೈದ್ಯರು ರೋಗಿಗಳನ್ನು ಸರಿಯಾಗಿ ನೋಡುವುದಿಲ್ಲ ಎಂಬ ದೂರುಗಳಿತ್ತು. ನಮ್ಮ ಮುತುವರ್ಜಿಯಲ್ಲೇ ಎಲ್ಲವೂ ನಡೆಯುತ್ತದೆ. ಎಂಬಿಬಿಎಸ್ ತರಬೇತಿಗೆ ಬಂದವರಿಗೆ ಪಾಠ ಹೇಳುವಾಗ ಜೊತೆಯಲ್ಲಿ ಇಟ್ಟುಕೊಳ್ಳುತ್ತೇವೆ. ನಾವೇ ಚಿಕಿತ್ಸೆ ಕೊಡುತ್ತೇವೆ ಎಂದಿದ್ದಾಗಿ ವಿವರಿಸಿದರು.
ತುಂಬ ಹಿರಿಯ ವೈದ್ಯರು ಕೆಲವೊಮ್ಮೆ ಇಲ್ಲಿಂದ ಬೇರೆ ಬೇರೆ ಆಸ್ಪತ್ರೆಗೆ ಹೊರಟು ಹೋಗುತ್ತಾರೆ. ಇದನ್ನು ಸರಕಾರ ತಡೆಯಬೇಕಿದೆ. ಇಲ್ಲಿ ಬರುವ ಅನಾರೋಗ್ಯಪೀಡಿತರನ್ನು ಕಾಪಾಡುವುದು ಹಿರಿಯ ವೈದ್ಯರ ಕರ್ತವ್ಯ. ಅವರನ್ನು ಹೊರಗಡೆ ಹೋಗಲು ಬಿಡಬಾರದು ಎಂದು ತಿಳಿಸಿದರು. ವೈದ್ಯರ ಕೊರತೆ ಆಗದಂತೆ ಸರಕಾರ ನೋಡಿಕೊಳ್ಳಬೇಕು; ನರ್ಸ್ ಮತ್ತಿತರ ಸಿಬ್ಬಂದಿ ಕೊರತೆ ಇದ್ದು ಅದನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕೆಲವು ಸಂದರ್ಭಗಳಲ್ಲಿ ಸ್ವಚ್ಛತೆಯ ಕೊರತೆ ಇದೆ. ಆ ಕಡೆ ಗಮನ ಕೊಡಬೇಕು ಎಂದು ಹೇಳಿದರು. ಶುಶ್ರೂಷೆ ಕೊಡುವ ಜಾಗದಲ್ಲಿ ಸ್ವಚ್ಛತೆಯ ಕೊರತೆಯಿಂದ ರೋಗ ರುಜಿನಗಳು ಹರಡುವ ಹಾಗೆ ಆಗಬಾರದು ಎಂದು ತಿಳಿಸಿದರು. ಬಿಗ್ ಬಾಸ್ ಕಾರ್ಯಕ್ರಮದ ಮನೆಗೆ ಬೀಗ ಹಾಕಿದ ಕುರಿತಂತೆ ಮಾಧ್ಯಮಗಳು ಗಮನ ಸೆಳೆದಾಗ, ಇದೇನು ಫ್ಯಾಕ್ಟರಿಯೇ? ಮಾಲಿನ್ಯ ನಿಯಂತ್ರಣ ಮಂಡಳಿಗೂ ಇದಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದರು.