ಮೈಸೂರು,ಜೂ30(DaijiworldNews/AZM):ಮಾಜಿ ಡಿಸಿಎಂ ಆರ್.ಅಶೋಕ್ ಅವರು ಸಮ್ಮಿಶ್ರ ಸರಕಾರದ ವಿರುದ್ಧ ಕಿಡಿಕಾರಿದ್ದು, ಮಧ್ಯಂತರ ಚುನಾವಣೆ ಬರುವುದಾದರೆ ಅದು ಬಿಜೆಪಿಯಿಂದ ಅಲ್ಲ. ಬದಲು ಜೆಡಿಎಸ್-ಕಾಂಗ್ರೆಸ್ ಒಳ ಜಗಳದಿಂದ ಎಂದು ಅವರು ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಮಧ್ಯಂತರ ಚುನಾವಣೆ ಬಂದರೆ ಯಾವುದೇ ಕಾರಣಕ್ಕೂ ಬಿಜೆಪಿಯಿಂದ ಬರಲ್ಲ. ನಿತ್ಯವೂ ನಾವು ಅವರಿಗೆ ಟಾಂಗ್ ಕೋಡೋ ಬದಲು, ಒಂದೇ ಸಲ ಮೈತ್ರಿ ಸರ್ಕಾರವನ್ನೇ ಮುಗಿಸಿ ಬಿಡಲಿ. ಪ್ರತಿದಿನ ಈ ಸರ್ಕಾರ ಬದುಕಿದೆಯೋ ಸತ್ತಿದ್ಯೋ ಅಂತ ಡಾಕ್ಟರ್ ಬಿಪಿ ಚೆಕ್ ಮಾಡುವಂತಾಗಿದೆ. ಇವರ ಆಡಳಿತದಲ್ಲಿ 1 ವರ್ಷದಿಂದ ಇರತ್ತೋ ಹೋಗ್ತೈತೋ ಅಂತ ಅನ್ನೋ ರೀತಿ ಇದೆ. ಮಧ್ಯಂತರ ಚುನಾವಣೆ ಬರೋದಾದ್ರೆ ಜೆಡಿಎಸ್- ಕಾಂಗ್ರೆಸ್ ಜಗಳದಿಂದ. ಅದರಲ್ಲೂ ದೇವೇಗೌಡರು, ಕುಮಾರಸ್ವಾಮಿ, ಸಿದ್ದರಾಮಯ್ಯರಿಂದ" ಎಂದು ವಾಗ್ದಾಳಿ ನಡೆಸಿದರು.
ಈ ಸರ್ಕಾರ ಬೇಕಿರೋದು ಕೇವಲ ಮೂರು ಜನಕ್ಕೆ ಮಾತ್ರ. ಡಿಕೆ ಶಿವಕುಮಾರ್, ಕುಮಾರಸ್ವಾಮಿ ಹಾಗೂ ಪರಮೇಶ್ವರ್ಗೆ ಮಾತ್ರ ಈ ಸರ್ಕಾರ ಬೇಕಾಗಿದೆ. ಕಾಂಗ್ರೆಸ್ಗೂ ಬೇಕಿಲ್ಲ, ಜೆಡಿಎಸ್ಗೂ ಈ ಮೈತ್ರಿ ಬೇಕಿಲ್ಲ. ಕೇವಲ ಅಧಿಕಾರದ ಆಸೆಗೆ ಇವರು ಅಂಟಿಕೊಂಡಿದ್ದಾರೆ. ಕರ್ನಾಟಕದ ಜನ ಕಾಂಗ್ರೆಸ್ಗೊಂದು, ಜೆಡಿಎಸ್ಗೊಂದು ನಾಮ ಹಾಕಿದ್ದಾರೆ. ಹೀಗೆ ನಾಮ ಹಾಕಿದ ಮೇಲೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕಿತ್ತು. ಆದರೆ ಅಧಿಕಾರದಿಂದ ಸ್ವಾರ್ಥ ಸಾಧನೆಗಾಗಿ ಸರ್ಕಾರ ನಡೆಸುತ್ತಿದ್ದಾರೆ. ಇರುವಷ್ಟು ದಿನ ಇರೋಣ ಅಂತ ಆಡಳಿತ ನಡೆಸುತ್ತಿದ್ದಾರೆ. ಸರ್ಕಾರ ಮಾಡೋ ಯೋಗ್ಯತೆ ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಿ. ನಾವು ಸರ್ಕಾರವನ್ನ ಮಾಡುತ್ತೇವೆ" ಎಂದು ಮೈತ್ರಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಐಎಂಎ ಪ್ರಕರಣ ಮುಚ್ಚಿ ಹಾಕಲು ಎಸ್ಐಟಿ ರಚನೆ ಮಾಡಿದ್ದಾರೆ ಎಂದು ಮಾಜಿ ಡಿಸಿಎಂ ಗಂಭೀರ ಆರೋಪ ಮಾಡಿದರು. ಮುಸ್ಲಿಂ ಭಾಂದವರಿಗೆ ಮೈತ್ರಿ ಸರ್ಕಾರ ಮೋಸ ಮಾಡುತ್ತಿದೆ. ಕೂಡಲೇ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಆದರೆ ಇಬ್ಬರ ದಾಖಲೆ ನಾಶವಾದ ಮೇಲೆ ಪ್ರಕರಣವನ್ನು ಸಿಬಿಐಗೆ ವಹಿಸುತ್ತಾರೆ. ಆ ನಂತರ ತನಿಖೆಯಲ್ಲಿ ಯಾವುದೇ ಸಾಕ್ಷಿಗಳು ಸಿಗುವುದಿಲ್ಲ. ಡಿವೈಎಸ್ಪಿ ಗಣಪತಿ, ಶಾರದ ಚಿಟ್ ಫಂಡ್ ಪ್ರಕರಣದಲ್ಲೂ ಹೀಗೆ ಆಗಿದೆ. ಸುಪ್ರೀಂಕೋರ್ಟ್ ಕೊಲ್ಕತ್ತಾ ಪೊಲೀಸ್ ಆಯುಕ್ತರ ಸಾಕ್ಷಿ ನಾಶದ ಬಗ್ಗೆ ಹೇಳಿದೆ.ಹಾಗಾಗಿ ಕೂಡಲೇ ಪ್ರಕರಣ ಸಿಬಿಐಗೆ ವಹಿಸದಿದ್ದರೆ ಐಎಂಎ ಪ್ರಕರಣ ಮುಚ್ಚಿ ಹೋಗುವ ಸಾಧ್ಯತೆ ಇದೆ" ಎಂದರು.